May the railway overbridge be inaugurated soon.
ಬಂಗಾರಪೇಟೆ: ನಗರದಲ್ಲಿ ನಿಮಾರ್ಣಗೊಂಡಿರುವ ಬೂದಿಕೋಟೆ ರಸ್ತೆಯ ನೂತನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದರು.
ಬೂದಿಕೋಟೆ ರಸ್ತೆಯ ನೂತನ ರೈಲ್ವೆ ಮೇಲ್ಸೇತುವೆ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಸಾರ್ವಜನಿಕರ ಬಹುಕಾಲದ ಬೇಡಿಕೆ ಮನಗಂಡು ಸಂಸದರಾಗಿದ್ದ ಅವಧಿಯಲ್ಲಿ ಅಂದಿನ ರೈಲ್ವೆ ಸಚಿವರಿಗೆ ವಿಡಿಯೋ ಕರೆ ಮೂಲಕ ಸ್ಥಳದ ಸಮಸ್ಯೆ ತೋರಿಸಿ ಸೇತುವೆಯ ಅಗತ್ಯತೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಹೇಳಿದರು. ಬಳಿಕ ರೈಲ್ವೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ, ಯೋಜನೆಗೆ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು ಎಂದರು.
ರಸ್ತೆ ಅಗಲೀಕರಣ ವೇಳೆ ರಸ್ತೆ ಬದಿಯ ಮನೆಗಳನ್ನು ತೆರವುಗೊಳಿಸಲು ಗುರುತು ಹಾಕಲಾಗಿದ್ದರೂ, ಸಾರ್ವಜನಿಕರಿಗೆ ತೊಂದರೆಯಾಗದಂತೆ ರೈಲ್ವೆ ಇಲಾಖೆಯ ಕಾಂಪೌಂಡ್ ಗೋಡೆಯನ್ನು ಸ್ಥಳಾಂತರಿಸಿ ರಸ್ತೆ ಅಗಲೀಕರಣ ನಡೆಸುವ ಮೂಲಕ ಅನೇಕ ಕುಟುಂಬಗಳ ಮನೆಗಳನ್ನು ರಕ್ಷಿಸಲಾಗಿದೆ ಎಂದರು.
ಪ್ರಸ್ತುತ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಹಾಲಿ ಸಂಸದ ಮಲ್ಲೇಶ್ ಬಾಬು ಕಾನೂನು ಕ್ರಮಗಳನ್ನು ಅನುಸರಿಸಿ ಕಾಮಗಾರಿ ಪೂರ್ಣಗೊಳಿಸಿದ್ದು, ಸೇತುವೆಯನ್ನು ತಕ್ಷಣ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜತೆಗೆ ಬಂಗಾರಪೇಟೆಯಲ್ಲಿ ಅದೇ ಪಕ್ಷದ ಶಾಸಕರಿದ್ದು, ಪಿಡಬ್ಲ್ಯುಡಿ ಇಲಾಖೆ ಮೂಲಕ ಸೇತುವೆಯ ಸುರಕ್ಷತಾ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ನರೇಂದ್ರ ಮೋದಿ ನೇತೃತ್ವದಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸುಮಾರು 600 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೇರಿಕೆ ಜತೆಗೆ ಅಗತ್ಯವಿರುವಲ್ಲಿ ಮೇಲ್ಸೇತುವೆ ನಿಮಾರ್ಣಕ್ಕೆ ನೆರವಾಗಿದೆ ಎಂದರು.