ಭೋವಿ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಲಿ Bhovi community
- ಸಂಸದ ಎಂ.ಮಲ್ಲೇಶ್ ಬಾಬು ಸಲಹೆ
- ಅಧಿಕಾರಿಗಳು ಸಮುದಾಯಕ್ಕೆ ಸಹಕಾರ ನೀಡಿ
ಕೋಲಾರ: ಭೋವಿ ಜನಾಂಗವು ಹಿಂದಿನಿಂದಲೂ ವಿದ್ಯಾಭ್ಯಾಸದ ಕಡೆ ಗಮನ ಹರಿಸದೆ ಕಲ್ಲು, ಮಣ್ಣು, ಕೆರೆ ಕಟ್ಟೆಗಳನ್ನು ಕಟ್ಟುವ ಕೆಲಸವನ್ನು ಮಾಡಿಕೊಂಡು ಜೀವನ ಮಾಡಿಕೊಂಡು ಬಂದವರು. ಯಾರೂ ದೊಡ್ಡಮಟ್ಟದ ಅಧಿಕಾರಿಗಳಾಗಲಿಲ್ಲ. ಇನ್ನಾದರೂ ಜನಾಂಗವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಂಸದ ಎಂ.ಮಲ್ಲೇಶ್ಬಾಬು ತಿಳಿಸಿದರು. Bhovi community
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಮಾತನಾಡಿ, ಭೋವಿ ಸಮುದಾಯಕ್ಕೆ ಎಲ್ಲ ರೀತಿಯ ಸಹಾಯ ಮಾಡಬೇಕು. ಸಮುದಾಯವು ಮೈಸೂರಿನ ಕೆಆರ್ಎಸ್ ಜಲಾಶಯ ಕಟ್ಟಿದ್ದಾರೆ. ಅಂತಹ ಶಾಶ್ವತವಾಗಿ ಉಳಿಯುವಂತಾ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದರು.
ಜಿಲ್ಲಾಡಳಿತ ಸೇರಿ ಸಂಬಂಧಪಟ್ಟ ಅಧಿಕಾರಿಗಳು ನರಸಾಪುರ ಬಳಿ ಕಲ್ಲಿನ ಬ್ಲಾಕ್ಗಳನ್ನು ತಯಾರಿಸುವ ಕೆಲಸ ಭೋವಿ ಸಮುದಾಯಕ್ಕೆ ಕೊಡಲು ಸೂಚನೆ ಕೊಡಬೇಕು. ಸಮುದಾಯದ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಎರಡನೇ ಹಾಗೂ ನಾಲ್ಕನೆಯ ಶನಿವಾರ ಅರ್ಧ ದಿವಸ ಮಾತ್ರ ಕೆಲಸ ಮಾಡಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ನೆರವು ನೀಡಲು ಸಿಎಸ್ಆರ್ ಅನುದಾನವನ್ನು ಆರೋಗ್ಯ, ಶಿಕ್ಷಣಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೆಲವರು ನನ್ನ ಮತ್ತು ಎಂಎಲ್ಸಿ ಅನಿಲ್ ಕುಮಾರ್ ಅವರನ್ನು ಜೋಡೆತ್ತೂ, ಲವಕುಶ, ಅಂತಾರೆ ಆದರೆ ನಾವು ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು. ಆದರೆ ವ್ಯತ್ಯಾಸವಾಗಿ ಬೇರೆ ಬೇರೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರು, ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೇವೆ. ನನಗೆ ಜಾತಿ ಇಲ್ಲ 700 ವೊಟು ಇಟ್ಟುಕೊಂಡು ಏನು ಮಾಡುವುದು. ಆದರೂ ಕೋಲಾರ ಕ್ಷೇತ್ರದಲ್ಲಿ ಗೆದ್ದಿದ್ದೇನೆ. ಭೋವಿ ಸಮುದಾಯದಷ್ಟು ಬಲ ನನಗೆ ಇದ್ದಿದ್ದರೆ ಏನು ಬೇಕಾದರೂ ಮಾಡಬಹುದು ಎಂದರು.
ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ಸಮಾಜದ ಕುರಿತು ಜಾಗೃತಿ ಮೂಡಿಸಬೇಕು. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕುಲ ಕಸುಬು ಬಿಟ್ಟು ಬೇರೆ ದಿಕ್ಕಿನಲ್ಲಿ ಆಲೋಚಿಸುವ ಅಗತ್ಯವಿದೆ. ಆದರೆ, ಈ ದೇಶದಲ್ಲಿ ಮಾನಸಿಕ ಗುಲಾಮಿಗಿರಿ ನೆಲೆಸಿದೆ. ಅದರಿಂದ ಹೊರಬರಬೇಕಿದೆ. ಇದಕ್ಕೆ ಶಿಕ್ಷಣ ಅಗತ್ಯ, ಕೌಶಲ್ಯ ಕಲಿಸಬೇಕು. ಇದು ವ್ಯವಸ್ಥೆಯ ಜವಾಬ್ದಾರಿಯಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಈಗ ಯಂತ್ರೋಪಕರಣಗಳು ಇದ್ದರೂ ಹೊಸದಾಗಿ ಯಾವುದೇ ಕೆರೆ ನಿಮಾರ್ಣ ಮಾಡಲು ಸಾಧ್ಯವಾಗಿಲ್ಲ. ಬೇರೆ ರಾಜ್ಯಗಳಲ್ಲಿ ಭೋವಿ ಸಮಾಜಕ್ಕೆ ಮೀಸಲಾತಿ ಇಲ್ಲ. ಕರ್ನಾಟಕದಲ್ಲಿ ಸಮಾಜಕ್ಕೆ ಮೀಸಲಾತಿ ಇದೆ ಎಂದರು.
ಕನ್ನಡ ಮತ್ತು ಸಂಸತ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಸಮುದಾಯದ ಮುಖಂಡರಾದ ಎಸ್.ವಿ ಲೋಕೇಶ್, ಎಸ್.ಚೌಡಪ್ಪ, ನುಕ್ಕನಹಳ್ಳಿ ಶ್ರೀನಿವಾಸ್ ಇದ್ದರು.