ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ಜಿಲ್ಲಾ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಶೀಲ್​ ನಮೋಶಿ, ಎ.ಕೆ.ರಾಮೇಶ್ವರ್​, ವಿಜಯಕುಮಾರ ತೇಗಲತಿಪ್ಪಿ, ರಾಜೇಂದ್ರ ಝಳಕಿ, ಮಹೇಶ ಹೂಗಾರ್​ ಇತರರಿದ್ದರು. 
ರಾಜ್ಯ

ಶಿಕ್ಷಕರದ್ದು ಒತ್ತಡರಹಿತ ಜೀವನವಾಗಲಿ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ ಹೇಳಿಕೆ
  • ಶಿಕ್ಷಕರ ಜಿಲ್ಲಾ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ
ಕಲಬುರಗಿ: ಶಿಕ್ಷಕರ ಮೇಲೆ ನಿರಂತರ ಕಾರ್ಯಭಾರದ ಒತ್ತಡ ಸಲ್ಲದು. ಇಂದು ಶಿಕ್ಷಕನನ್ನು ಮಕ್ಕಳಿಗೆ ಪಾಠ ಮಾಡುವುದಕ್ಕಿಂತಲೂ ಇನ್ನಿತರ ಕೆಲಸಕ್ಕೆ ಹೆಚ್ಚು ಬಳಸಲಾಗುತ್ತಿದೆ ಎಂದು ವಿಧಾನ ಪರಿಷತ್​ ಸದಸ್ಯ ಡಾ.ಶಶೀಲ್​ ನಮೋಶಿ ಕಳವಳ ವ್ಯಕ್ತಪಡಿಸಿದರು.
ಕನ್ನಡ ಭವನ ಪ್ರಾಂಗಣದ ಸಾಹಿತ್ಯ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್​, ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಥಮ ಶಿಕ್ಷಕರ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಹುದ್ದೆ ಪವಿತ್ರವಾಗಿದ್ದು, ಎಲ್ಲರೂ ಶಿಕ್ಷಕರಾಗಲು ಹಂಬಲಿಸುತ್ತಿದ್ದರು. ಆದರೀಗ ಚುನಾವಣೆ ಕಾರ್ಯ, ಇಲಾಖೆ ಮೇಲಧಿಕಾರಿಗಳ ಆದೇಶ ಪಾಲನೆ ಸೇರಿ ಆನ್​ಲೈನ್​ ಕಾರ್ಯಭಾರ ಇಂದು ಶಿಕ್ಷಕರು ಬಿಗಿ ಉಸಿರು ಹಿಡಿದು ಬದುಕುವಂತಾಗಿದೆ. ಇಂದು ಒತ್ತಡ ರಹಿತ ಜೀವನ ಶಿಕ್ಷಕರದ್ದಾಗಬೇಕು ಎಂದು ಹೇಳಿದರು.
ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ್​ ಗುರು ಕಿರಣ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಬಹುಮುಖ ಪ್ರತಿಭೆಯ ಶಿಕ್ಷಕರಿದ್ದಾರೆ. ಒಬ್ಬ ಸಾಹಿತಿ ಶಿಕ್ಷಕರಿಂದ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ತುಂಬಾ ಮಹತ್ವದ್ದಾಗಿದೆ. ಶಿಕ್ಷಕ ಸಾಹಿತಿಗಳ ಸಮ್ಮೇಳನ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಚಾರಿತ್ರಿಕವಾಗಿ ಉಳಿಯುತ್ತದೆ. ಜತೆಗೆ ಗುರು ಕಿರಣ ಕೃತಿ ಮೂಲಕ ಸಾಹಿತಿಗಳ ಪರಿಚಯಿಸಿದ್ದು ಅಭಿನಂದನಾರ್ಹ ಕಾರ್ಯ ಎಂದು ಶ್ಲಾಘಸಿದರು.
ಸಮ್ಮೇಳನಾಧ್ಯಕ್ಷ ರಾಜೇಂದ್ರ ಝಳಕಿ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರ ಪ್ರತ್ಯೇಕ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು. ಶಿಕ್ಷಕರು ರಚಿಸುವ ಕೃತಿಗಳ ಪ್ರಕಟಣೆ, ಅನುವಾದ ಹಾಗೂ ವಿತರಣೆಗೆ ವಿಶೇಷ ಅನುದಾನದ ನೆರವು ನೀಡಬೇಕು. ಈ ಕುರಿತು ರಾಜ್ಯ ಸರ್ಕಾರ ಮುತುರ್ವಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು.
ಪ್ರಮುಖರಾದ ಮಹೇಶ ಹೂಗಾರ, ಸಂತೋಷ ಗಂಗೂ, ಸೇವಂತಾ ಪಿ.ಚವ್ಹಾಣ, ನೀಲಕಂಠ ಜಮಾದಾರ, ಚಂದ್ರಕಾಂತ ಏರಿ, ಮಲ್ಲಿನಾಥ ನಾಗನಹಳ್ಳಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಧರ್ಮರಾಜ ಜವಳಿ, ರಾಜೇಂದ್ರ ಮಾಡಬೂಳ, ಸೋಮಶೇಖರಯ್ಯ ಹೊಸಮಠ, ಗಣೇಶ ಚಿನ್ನಾಕಾರ, ಸಿದ್ದಲಿಂಗ ಬಾಳಿ, ಸಿದ್ದರಾಮ ಹಂಚನಾಳ, ರವಿ ಶಹಾಪುರಕರ್​, ಎಸ್​.ಕೆ.ಬಿರಾದಾರ, ನಾಗಪ್ಪ ಸಜ್ಜನ್​, ವೀರಭದ್ರಪ್ಪ ಗುರುಮಠಕಲ್​, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ, ಪ್ರಕಾಶ ಗೊಣಗಿ, ಪ್ರೊ.ಎಸ್​.ಎಲ್​. ಪಾಟೀಲ, ಬಾಬುರಾವ ಜಮಾದಾರ, ಶರಣಬಸಪ್ಪ ಸುಗೂರ, ಪರಮಾನಂದ ಸರಸಂಬಿ ಇತರರಿದ್ದರು.
ಸಾಹಿತಿ ಮುಡುಬಿ ಗುಂಡೇರಾವ್​ ಸಮಾರೋಪ ನುಡಿಗಳನ್ನಾಡಿದರು. ಶಿಕ್ಷಕ ಸಾಹಿತಿಗಳಾದ ಡಾ.ಪ್ರಮೀಳಾ ಪಾಟೀಲ್​ ಬಿಬ್ಬಳ್ಳಿ, ಬಸವರಾಜ ಐನೋಳ್ಳಿ, ಮಂಗಲಾ ಕಪರೆ, ಪ್ರಭು ಫುಲಾರಿ ಕರ್ಜಗಿ, ಲೀಲಾವತಿ ಕುಲಕರ್ಣಿ, ಅಂಬಾರಾಯ ಮಡ್ಡೆ, ಗಿರಿಮಲ್ಲಪ್ಪ ವಳಸಂಗ, ಆರ್​.ಎಚ್​. ಪಾಟೀಲ್​, ಸಂತೋಷ ಹೂಗಾರ ಅವರಿಗೆ ಗುರು ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಗಮನ ಸೆಳೆದ ಅರಿವು ಅನಾವರಣ ಗೋಷ್ಠಿ
ಶೈಕ್ಷಣಿಕ ಸಮಸ್ಯೆಗಳು-ಪರಿಹಾರೋಪಾಯಗಳು ಕುರಿತು ಗಿರೀಶ ಕಡ್ಲೇವಾಡ, ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಕುರಿತು ಸಾಹೇಬಗೌಡ ಬಿರಾದಾರ, ಸಮ್ಮೇಳನಾಧ್ಯಕ್ಷರ ಬದುಕು&ಬರಹ ಕುರಿತು ಡಾ.ಡಿ.ಎನ್​.ಪಾಟೀಲ್​ ಮಾತನಾಡಿದರು. ಕಲ್ಯಾಣಕುಮಾರ ಶೀಲವಂತ ದಿಕ್ಸೂಚಿ ನುಡಿಗಳನ್ನಾಡಿದರು. ಚಂದ್ರಕಾಂತ ಬಿರಾದಾರ, ನಂದಿನಿ ಸನಬಾಳ, ರೇಣುಕಾ ಡಾಂಗೆ, ಚಂದ್ರಶೇಖರ ಪಾಟೀಲ, ಕವಿತಾ ಹಳ್ಳಿ ಇದ್ದರು. ಶಿಕ್ಷಕ ಸಾಹಿತಿ ಅನುಪಮಾ ಅಪಗುಂದೆ ಅಧ್ಯಕ್ಷತೆಯಲ್ಲಿ ಜರುಗಿದ ಕಾವ್ಯ ಶಿಕ್ಷಣ ಶಿಕ್ಷಕರ ಕವಿಗೋಷ್ಠಿಗೆ ಪರಮೇಶ್ವರ ಓಕಳಿ, ರಾಜೇಶ ನೀಲಹಳ್ಳಿ, ಮಹೇಶಕುಮಾರ ಹೆಬ್ಬಾಳೆ, ಮಲ್ಲಿಕಾರ್ಜುನ ದೇವರಗುಡಿ, ವಿಶಾಲಾ ಮಾಯಣ್ಣನವರ್​ ಕವನಗಳನ್ನು ಪ್ರಸ್ತುತ ಪಡಿಸಿ ಗಮನಸೆಳೆದರು.
"

ಶಿಕ್ಷಕರ ಮೇಲೆ ಅನೇಕ ಹಲ್ಲೆ, ಒತ್ತಡ ಹಾಗೂ ಮಾನಸಿಕ ಕಿರುಕುಳ ನಿರಂತರ ನಡೆಯುತ್ತಿವೆ. ಇವುಗಳ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಶಿಕ್ಷಕರ ಸಾಹಿತ್ಯ ಭವನ, ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಅತ್ಯುತ್ತಮ ಸಾಹಿತ್ಯ ಕೃಷಿ ಮಾಡುವ ಶಿಕ್ಷಕರಿಗೆ ಪ್ರತಿ ವರ್ಷ ವಿಶೇಷ ಪ್ರಶಸ್ತಿ ನೀಡಿ ಗೌರವಿಸಬೇಕು.

— > ರಾಜೇಂದ್ರ ಝಳಕಿ, ಸಮ್ಮೇಳನಾಧ್ಯಕ್ಷ, ಜಿಲ್ಲಾ ಮಟ್ಟದ ಪ್ರಥಮ ಶಿಕ್ಷಕರ ಸಾಹಿತ್ಯ ಸಮ್ಮೇಳನ
"

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖ. ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಬಿತ್ತಿ ಸುಸಂಸತ ಸಮಾಜ ಕಟ್ಟುತ್ತಾರೆ. ಸಮನ್ವಯತೆ ಕೊಂಡಿಯಾಗಿ ಭಾವ ಬೆಸುಗೆಗಳ ಸೇತುವೆಯಾಗಿ ಶಿಕ್ಷಕರು ಕಾರ್ಯನಿರ್ವಹಿಸುತ್ತಾರೆ.

— > ವಿಜಯಕುಮಾರ ತೇಗಲತಿಪ್ಪಿ, ಜಿಲ್ಲಾಧ್ಯಕ್ಷ, ಕಸಾಪ