ಬೆಂಗಳೂರು: ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗೆ (ಐಸಿಎಆರ್- ಐಐಎಚ್‌ಆರ್) ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಭಾನುವಾರ ಭೇಟಿ ನೀಡಿ ವಿವಿಧ ತಳಿಗಳ ಹಣ್ಣು, ತರಕಾರಿ, ಹೂವುಗಳ ಅಭಿವೃದ್ಧಿಗಾಗಿ ಕೈಗೊಂಡ ಪ್ರಯೋಗಗಳ ಕುರಿತು ವಿಜ್ಞಾನಿಗಳ ಬಳಿ ಚರ್ಚಿಸಿದರು.
ಐಐಎಚ್‌ಆರ್ ತಂತ್ರಜ್ಞಾನಗಳಿಂದ ಪ್ರಯೋಜನ ಪಡೆದ ರೈತರೊಂದಿಗೆ ಸಂವಾದ ನಡೆಸಿದರು. ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಿದ ಬಳಿಕ ಶಿವರಾಜ್‌ಸಿಂಗ್ ಚೌಹಾಣ್ ಮಾತನಾಡಿದರು.
ರೈತರ ಆದಾಯ ಹೆಚ್ಚಿಸುವ ಪ್ರಭೇದಗಳು,ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಹಣ್ಣು, ತರಕಾರಿ, ಹೂವುಗಳ ಬೇಡಿಕೆ ಹೆಚ್ಚಿದೆ. ಇವುಗಳ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರವಾಗಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಸಂಶೋಧನೆಗಳ ಇನ್ನಷ್ಟು ಉತ್ಕೃಷ್ಟವಾಗಬೇಕು ಎಂದು ಸೂಚಿಸಿದರು.
ಸಮಗ್ರ ಕೃಷಿಯಿಂದ ಸಣ್ಣ ರೈತರ ಆದಾಯ ಹೆಚ್ಚಿಸಬಹುದು. ಪಶುಸಂಗೋಪನೆ, ಮೀನುಗಾರಿಕೆ ಮತ್ತು ಜೇನುಸಾಕಣೆಯೊಂದಿಗೆ ಬೆಳೆ ಬೆಳೆದರೆ ರೈತರು ತಮ್ಮ ಆದಾಯ ದ್ವಿಗುಣಗೊಳಿಸಬಹುದು. ಸುಸ್ಥಿರತೆ, ಪೌಷ್ಟಿಕಾಂಶದ ಭದ್ರತೆಗೆ ತೋಟಗಾರಿಕಾ ಬೆಳೆಗಳೊಂದಿಗೆ ಇತರ ಬೆಳೆಗಳ ವೈವಿಧ್ಯೀಕರಣ ಅತ್ಯಗತ್ಯ. ರೈತರಿಗೆ ಹೆಚ್ಚಿನ ಆದಾಯಗಳಿಸಲು ಬೆಳೆಗಳ ಜೀವಿತಾವಧಿ ಹೆಚ್ಚಿಸುವಂತೆ ವಿಜ್ಞಾನಿಗಳಿಗೆ ಸಲಹೆ ನೀಡಿದರು.
ಐಸಿಎಆರ್- ಐಐಎಚ್‌ಆರ್ ನಿರ್ದೇಶಕ ಡಾ.ತುಸಾರ್ ಕಾಂತಿ ಬೆಹೆರಾ ಸೇರಿ ವಿಜ್ಞಾನಿಗಳಿದ್ದರು.