ಚಿಕ್ಕಬಳ್ಳಾಪುರ : ಧರ್ಮದಲ್ಲಿ ರಾಜಕಾರಣ ಬೆರೆಯಬಾರದು. ಆದರೆ ರಾಜಕಾರಣದಲ್ಲಿ ಧರ್ಮ ಮತ್ತು ಮೌಲ್ಯಗಳು ಉಳಿಯುವಂತೆ ಧಾರ್ಮಿಕ ಗುರುಗಳು ರಾಜಕಾರಣಿಗಳಿಗೆ ಆಶೀರ್ವಾದ ನೀಡಿ ಮಾರ್ಗದರ್ಶನ ಮಾಡಬೇಕು ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಏಳನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸತ್ಯಸಾಯಿ ಬಾಬಾ ಅವರ ಆಶಯದಂತೆ ಸದ್ಗುರು ಮಧುಸೂದನ ಸಾಯಿ ಮುನ್ನಡೆಯುತ್ತಿದ್ದು, ರೈತರ ಬದುಕು ಹಾಗೂ ಸಮಾಜದ ಜೀವನಮಟ್ಟ ಸುಧಾರಣೆಗೆ ಕೈಗೊಂಡಿರುವ ಸೇವಾಕಾರ್ಯಗಳು ಶ್ಲಾಘನೀಯ ಎಂದು ಸ್ವಾಮೀಜಿ ವಿವರಿಸಿದರು.
ಅವಧೂತ ವಿನಯ್ ಗುರೂಜಿ ಮಾತನಾಡಿ, ಸತ್ಯಸಾಯಿ ಸಂಸ್ಥೆಯು ಮಾನವೀಯತೆ, ದೈವತ್ವ ಹಾಗೂ ಜೀವನದ ಉದ್ದೇಶವನ್ನು ಕಲಿಸುವ ಕೇಂದ್ರವಾಗಿದೆ. ರಾಜಕಾರಣಿಗಳಿಗೆ ಉತ್ತಮ ಆಡಳಿತದ ಮಾರ್ಗದರ್ಶನ ನೀಡುವುದರ ಜತೆಗೆ ಸನ್ಯಾಸಿಗಳಿಗೆ ಶಿಸ್ತು ಮತ್ತು ಸಂಯಮದ ಪಾಠ ಕಲಿಸುವ ಕಾರ್ಯವೂ ಇಲ್ಲಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ, ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಖ್ಯಾತ ನೃತ್ಯ ಕಲಾವಿದೆ ಸೋನಾಲ್ ಮಾನ್ಸಿಂಗ್ ತಂಡದ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು.
ಮನುಷ್ಯನ ಬದುಕಿನ ಅಜ್ಞಾನ ಮತ್ತು ಅಂಧಕಾರವನ್ನು ನಿವಾರಿಸುವ ಶಕ್ತಿ ಕಾಳರಾತ್ರಿ ದೇವಿಗಿದೆ. ಕತ್ತಲಿನಲ್ಲಿ ಭಯಗೊಂಡ ಮಗು ತಾಯಿಯನ್ನು ನೆನೆಯುವಂತೆ, ಮನುಷ್ಯರೂ ತಮ್ಮ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಜಗನ್ಮಾತೆಯ ಮೊರೆ ಹೋಗಬೇಕು.ಸದ್ಗುರು ಮಧುಸೂದನ ಸಾಯಿ