May farmers receive sowing seeds on time.
ಚಿಕ್ಕನಾಯಕನಹಳ್ಳಿ: ರೈತರಿಗೆ ಮುಂಗಾರು ಹಂಗಾಮಿಗೆ ಅಗತ್ಯ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸಕಾಲಕ್ಕೆ ಒದಗಿಸಬೇಕೆಂದು ಶಾಸಕ ಸಿ.ಬಿ. ಸುರೇಶ್ ಬಾಬು ಹೇಳಿದರು.
ತಾಲೂಕು ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಕೃಷಿ ಪರಿಕರ ಮಾರಾಟಗಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪೂರ್ವ ಮುಂಗಾರು ಹಂಗಾಮಿನಲ್ಲಿ ಹೆಸರು, ಅಲಸಂದೆ ಹಾಗೂ ಎಳ್ಳು ಬೆಳೆಗಳನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ಸಾಮೆ ಬೆಳೆ ಬೆಳೆಯುವ ಸಾಧ್ಯತೆಯೂ ಇದೆ. ಜತೆಗೆ, ರಾಗಿ ಈ ಭಾಗದ ಪ್ರಮುಖ ಮುಂಗಾರು ಬೆಳೆ ಆಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಮುಂಚಿತವಾಗಿ ದಾಸ್ತಾನಿಕರಿಸುವುದು ಅತ್ಯವಶ್ಯಕವಾಗಿದೆ. ರೈತರಿಗೆ ಸಾವಯವ ಕೃಷಿ ಹಾಗೂ ಸಹಜ ಕೃಷಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ರೈತರ್ಲು ನ್ಯಾನೋ ಯೂರಿಯಾ ಸೇರಿದಂತೆ ಹೊಸ ತಂತ್ರಜ್ಞಾನಗಳತ್ತ ಒಲವು ತೋರಬೇಕಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಪರಿಕರ ಮಾರಾಟಗಾರರು ಈ ಕುರಿತು ವ್ಯಾಪಕವಾಗಿ ಪ್ರಚಾರ ನಡೆಸಬೇಕು ಎಂದರು.
ಕೃಷಿ ಪರಿಕರ ಮಾರಾಟಗಾರರು ಹಾಗೂ ಸಹಕಾರಿ ಸಂಘಗಳು ಅಗತ್ಯವಿರುವ ರಸಗೊಬ್ಬರ, ವಿಶೇಷವಾಗಿ ಯೂರಿಯಾ ಗೊಬ್ಬರವನ್ನು ಮುಂಚಿತವಾಗಿ ದಾಸ್ತಾನಿಕರಿಸಲು ಕ್ರಮವಹಿಸಬೇಕು. ಜುಲೈ ಮತ್ತು ಆಗಸ್ಟ್ನಲ್ಲಿ ರಸಗೊಬ್ಬರಗಳ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆ ಮಾಡಬೇಕು ಹಾಗೂ ಯಾವುದೇ ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಾಗಿ ಮಾರಾಟ ಮಾಡಬಾರದು ಎಂದು ಸೂಚನೆ ನೀಡಿದರು.
ಎಫ್.ಐ.ಡಿ ಮೂಲಕ ಈ ವರ್ಷ ಗೊಬ್ಬರ ವಿತರಣೆ ನಡೆಯುತ್ತಿರುವುದರಿಂದ, ರೈತರು ಕೇವಲ ಯೂರಿಯಾ ಗೊಬ್ಬರದ ಅವಲಂಭಿಸದೇ, ಸಮಗ್ರ ಪೋಷಕಾಂಶ ನಿರ್ವಹಣಾ ಪದ್ಧತಿಯನ್ನು ಅನುಸರಿಸಬೇಕು ಎಂದು ತಿಳಿಸಿದರು.