ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಶಾಸಕ ಎಚ್.ಕೆ.ಸುರೇಶ್ ಬೇಲೂರು ಸಮೀಪದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು. ಭಾಗ್ಯಮ್ಮ, ಜಯಣ್ಣಗೌಡ, ಧರ್ಮಪ್ಪ, ಸಿ.ಎಸ್.ಪ್ರಕಾಶ್, ಗೀತಾ, ಜಗದೀಶ್, ಮಂಜುನಾಥ್ ಇತರರಿದ್ದರು.
- ಶಾಸಕ ಎಚ್.ಕೆ.ಸುರೇಶ್
- ಹೊಯ್ಸಳ ಕ್ರೀಡಾಂಗಣ
ಬೇಲೂರು: ದೈಹಿಕ ಸಾಮರ್ಥ್ಯವಿದ್ದಾಗ ಮಾತ್ರ ಕ್ರೀಡೆ ಮತ್ತು ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎರಡರಲ್ಲೂ ಮುಂಚೂಣಿಗೆ ಬರಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ವಿಶ್ವ ಪ್ರೌಢಶಾಲೆ ಸಹಯೋಗದಲ್ಲಿ ಪಟ್ಟಣ ಸಮೀಪದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಆದ್ದರಿಂದ ಶಿಕ್ಷಕರು ಶಾಲೆಗಳಲ್ಲಿ ಪಠ್ಯದ ಜತೆಗೆ ಕ್ರೀಡೆಗೂ ಒತ್ತು ಕೊಡಬೇಕು. ವಿದ್ಯಾರ್ಥಿಗಳೂ ಸಹ ಕ್ರೀಡೆಯಲ್ಲಿ ಬಾಗವಹಿಸಿದಾಗ ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಿ ಗೆದ್ದಾಗ ಬೀಗದೆ, ಸೋತಾಗ ಅಳುಕದೆ ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕು ಎಂದು ತಿಳಿಸಿದರು.
ಸಣ್ಣಪುಟ್ಟ ವ್ಯತ್ಯಾಸಗಳಾದಾಗ ದೈಹಿಕ ಶಿಕ್ಷಕರು ಹಾಗೂ ತೀರ್ಪುಗಾರರು ಅವಲೋಕಿಸಿ ತೀರ್ಪು ನೀಡುತ್ತಾರೆ. ಆದರೆ ಈ ಸಂದರ್ಭ ಸಾರ್ವಜನಿಕರು ಮಧ್ಯಪ್ರವೇಶಿಸಿ ಗೊಂದಲ ಉಂಟು ಮಾಡದೆ ಕ್ರೀಡಾಕೂಟದ ಯಶಸ್ಸಿಗೆ ಸಹಕಾರ ನೀಡಬೇಕು. ಅಲ್ಲದೆ ಬೇಲೂರು ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಸಾಗುತ್ತಿರುವುದು ಸಂತೋಷ ತಂದಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶಾಸಕರು ಸಾಕಷ್ಟು ಬೆಂಬಲ ನಿಡುತ್ತಿದ್ದಾರೆ ಎಂದರು.
ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ವಿಶ್ವ ಪ್ರೌಢಶಾಲೆ ಸಂಸ್ಥಾಪಕ ಅಧ್ಯಕ್ಷ ಜಯಣ್ಣಗೌಡ, ಅಧ್ಯಕ್ಷ ಧರ್ಮಪ್ಪ, ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್, ಮುಖ್ಯ ಶಿಕ್ಷಕಿ ಗೀತಾ, ದೈಹಿಕ ಶಿಕ್ಷಣ ಪರಿವೀಕ್ಷಕ ಜಗದೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಕರಿಬಸಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್, ಕ್ರಾಥಾಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಡಿ.ಗಂಗಾಧರ್ ಇತರರಿದ್ದರು.