ಗುಂಡ್ಲುಪೇಟೆ ತಾಲೂಕಿನ ಚಿಕ್ಕಹುಂಡಿ ಗ್ರಾಮದಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮತ್ಸ್ಯ ಸಂಜೀವಿನಿ ಯೋಜನೆಯಲ್ಲಿ ಕೆರೆಗೆ ಮೀನುಮರಿಗಳನ್ನು ಬಿಡುವ ಕಾರ್ಯಕ್ರಮಕ್ಕೆ ಗಣೇಶ್ ಪ್ರಸಾದ್ ಚಾಲನೆ ನೀಡಿದರು. ಎಚ್.ಎನ್.ಬಸವರಾಜು, ನೀಲಕಂಠಪ್ಪ, ಅಂಬರೀಶ ಇದ್ದರು.
ಗುಂಡ್ಲುಪೇಟೆ: ಗ್ರಾಮಾಂತರ ಪ್ರದೇಶಗಳ ಮಹಿಳೆಯ ಸ್ವಾವಲಂಬನೆಗೆ ಮೀನುಗಾರಿಕೆ ಇಲಾಖೆ ಮತ್ಸ್ಯ ಸಂಜೀವಿನಿ ಯೋಜನೆ ಆರಂಭಿಸಿದ್ದು, ಸಂಘಟನೆ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಚಿಕ್ಕಹುಂಡಿ ಗ್ರಾಮದಲ್ಲಿ ಶುಕ್ರವಾರ ಮೀನುಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮತ್ಸ್ಯ ಸಂಜೀವಿನಿ ಯೋಜನೆಯಲ್ಲಿ ಕೆರೆಗೆ ಮೀನುಮರಿಗಳನ್ನು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷೆಯದ್ದಾಗಿದ್ದು, ಮಹಿಳಾ ಸಂಘದ ಸದಸ್ಯರ ಆದಾಯ ವೃದ್ಧಿಗೆ ನೆರವಾಗಲಿದೆ. ಮೀನುಗಾರಿಕೆ ಇಲಾಖೆಯು ಕೆರೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ನಾನಾ ತಳಿಯ ಮೀನುಗಳ ಮರಿಗಳನ್ನು ಬಿಡುತ್ತದೆ. ಜತೆಗೆ ಸದಸ್ಯರಿಗೆ ಕಿಟ್, ತರಬೇತಿ ಹಾಗೂ ಸಹಾಯಧನವನ್ನು ನೀಡಲಾಗುತ್ತದೆ. ಆದ್ದರಿಂದ ಆಸಕ್ತ ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮಾಜಿ ಸದಸ್ಯ ನೀಲಕಂಠಪ್ಪ, ಮುಖಂಡ ಅಂಬರೀಶ, ಮಹಿಳಾ ಸಂಘಟನೆಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.