ಕಲಬುರಗಿ : ಕಾಶಿ ಜ್ಞಾನಸಿಂಹಾಸನ ಮಹಾಪೀಠದಿಂದ ಸಾಧಕ ಮಹಿಳೆಯೋರ್ವರಿಗೆ ಪ್ರತಿವರ್ಷ ಕೊಡಮಾಡುವ ಮಾಲತಿ ಮಹಾರುದ್ರಪ್ಪ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರವನ್ನು ಪ್ರಕಟಿಸಲಾಗಿದ್ದು, 2026ನೇ ಸಾಲಿನ ಪ್ರಶಸ್ತಿಗೆ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ನ.29ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
ಜೇವರ್ಗಿ ತಾಲೂಕಿನ ಶಾಕಾಪುರದಲ್ಲಿರುವ ಕಾಶೀ ಪೀಠದ ಶಾಖಾ ತಪೋವನ ಮಠದಲ್ಲಿ ನ.29 ರಂದು ನಡೆಯಲಿರುವ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 37ನೇ ಪೀಠಾರೋಹಣ ವರ್ಧಂತಿ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.
ಪೀಠಾರೋಹಣ ವರ್ಧಂತಿ ಮಹೋತ್ಸವದ ಪ್ರಯುಕ್ತ ಅಂದು ಬೆಳಗ್ಗೆ 9ಕ್ಕೆ ಜಗದ್ಗುರುಗಳ ಸುವರ್ಣ ಕಿರೀಟಧಾರಣೆ ಹಾಗೂ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ನಂತರ ಶ್ರೀಜಗದ್ಗುರು ವಿಶ್ವಾರಾಧ್ಯ ಮಂದಿರದ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ. ಸಂಜೆ 6ಕ್ಕೆ ಧರ್ಮಸಭೆ ಹಾಗೂ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.
ಮಹಾರಾಷ್ಟ್ರದ ಪ್ರಸಿದ್ಧ ಉದ್ಯಮಿಗಳಾದ ಡಾ.ಬಾಬಾ ಕಲ್ಯಾಣಿಯವರ ಪತ್ನಿ ಸುನೀತ ಬಾಬಾ ಕಲ್ಯಾಣಿಯವರು ತಮ್ಮ ತಾಯಿ ಮಾಲತಿ ಖೇಣಿಯವರ ಸ್ಮರಣಾರ್ಥ ಕಾಶೀ ಪೀಠದಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು, ಸಮಾಜ ಸೇವೆ, ಶೈಕ್ಷಣಿಕ ಸಾಧನೆ, ವಿಶೇಷ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಅಪರೂಪದ ಸಾಧಕಿಯರನ್ನು ಗುರುತಿಸಿ ನೀಡಲಾಗುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಡಾ.ದಾಕ್ಷಾಯಣಿ ಅಪ್ಪ ಅವರು ಮಾಡುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ಮಾತೃಶಕ್ತಿ ಪುರಸ್ಕಾರವನ್ನು ನೀಡಲಾಗಿದೆ.