ಬೋಗಸ್ ದಾಖಲೆ ಸೃಷ್ಟಿಸಿ ನೂರಾರು ಸಿಎಲ್-7 ಪರವಾನಗಿ ಮಂಜೂರು: ಲೋಕಾಯುಕ್ತ ವರದಿಯಲ್ಲಿ ಬಹಿರಂಗ! Excise department
- ಬೆಂಗಳೂರಿನ ಕೆ.ಆರ್. ಪುರ ವ್ಯಾಪ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ನೂರಾರು ಸಿಎಲ್-7 ಲೈಸೆನ್ಸ್ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ
- ಅಸ್ತಿತ್ವದಲ್ಲಿಲ್ಲದ ಕಟ್ಟಡ, ಕೆರೆ ಜಾಗ ಹಾಗೂ ಸಿಎಲ್-9 ಮದ್ಯದಂಗಡಿಗಳ ವಿಳಾಸವನ್ನೇ ಬಳಸಿ ಬೋಗಸ್ ದಾಖಲೆಗಳ ಮೂಲಕ ಲೈಸೆನ್ಸ್ ಪಡೆಯಲಾಗಿದೆ
- ಈ ಸಂಬಂಧ ತನಿಖೆ ನಡೆಸಲು ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಲೋಕಾಯುಕ್ತ ಅಧಿಕಾರಿಗಳು ಪತ್ರ ಬರೆದಿದ್ದಾರೆ
- ಪತ್ರ ಬರೆದು 6 ತಿಂಗಳು ಕಳೆದರು ಕೂಡ ಭ್ರಷ್ಟರ ವಿರುದ್ಧ ತನಿಖೆ ನಡೆಸಲ ಸರ್ಕಾರದಿಂದ ಯಾವುದೇ ಅನುಮತಿ ಸಿಕ್ಕಿಲ್ಲ
ಬೆಂಗಳೂರು: ಮಥ್ಲಿ ಮನಿ, ‘ಹಫ್ತಾ’ ವಸೂಲಿ, ‘ಕಾಸಿಗಾಗಿ ಪೋಸ್ಟಿಂಗ್ ದಂಧೆ, ಕಿಕ್‌ಬ್ಯಾಕ್, ಹೋಟೆಲ್ ಮತ್ತು ವಸತಿಗೃಹ (ಸಿಎಲ್-7) ಮಂಜೂರಾತಿಗೆ ಕೋಟ್ಯಂತರ ರೂಪಾಯಿ ಲಂಚ ವಸೂಲಿ ಮತ್ತು ಮಧ್ಯವರ್ತಿಗಳ ಹಾವಳಿ ಸೇರಿ ಒಂದಿಲ್ಲೊಂದು ಅಕ್ರಮ ನಡೆಯುತ್ತಿರುವ ಅಬಕಾರಿ ಇಲಾಖೆಯಲ್ಲಿ ( Excise department ) ನಿಯಮಬಾಹಿರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲ ಅಧಿಕಾರಿಗಳು ನೂರಾರು ಸಿಎಲ್-7 ಪರವಾನಗಿ ಮಂಜೂರಾತಿ ಮಾಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಬೆಂಗಳೂರು ನಗರ ಜಿಲ್ಲೆ( ಬಿಯುಡಿ)-2 ಅಬಕಾರಿ ಉಪ ಆಯುಕ್ತ ಅಜಿತ್ ಕುಮಾರ್ ಸೇರಿ ಇತರ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಆಪಾದನೆಗಳ ಕುರಿತು ತನಿಖೆ ಅಥವಾ ವಿಚಾರಣೆ ನಡೆಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಅನುಮತಿ ನೀಡುವಂತೆ ಕೋರಿ ಲೋಕಾಯಕ್ತ, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಪತ್ರ ಬರೆದು 6 ತಿಂಗಳು ಕಳೆದರೂ ಆರ್ಥಿಕ ಇಲಾಖೆ ಇದಕ್ಕೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ.
ಈ ಕುರಿತು ವಕೀಲ ಡಾ. ಹರಿಪ್ರಸಾದ್ ಎಂಬುವರು ಲೋಕಾಯುಕ್ತಗೆ ದೂರು ಕೊಟ್ಟಿದ್ದರು. ಈ ದೂರಿನ ಸ್ವಾರಾಂಶ ಆಧಾರಿಸಿ ಲೋಕಾಯುಕ್ತರು, ತನಿಖೆಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪತ್ರ ಬರೆದಿತ್ತು.
ಪತ್ರದಲ್ಲಿ ಏನಿದೆ?
ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ವಲಯ ಬಿಯುಡಿ- 2 ವ್ಯಾಪ್ತಿಯಡಿ ಬರುವ ಕೆ. ಆರ್. ಪುರದ ಮೇದಹಳ್ಳಿ, ಕೌದೇನಹಳ್ಳಿ,ಬೀದರಹಳ್ಳಿ, ರಾಮಪುರ ಸೇರಿ ಇತರ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ನೂರಾರು ಸಿಎಲ್-7 ಲೈಸೆನ್ಸ್ ಮಂಜೂರಾತಿ ಮಾಡಲಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ (ಸಿಎಲ್-9) ಮದ್ಯ ಸೇವನೆಗೆ ಇರುವ ಕಂಪಾರ್ಟ್‌ಮೆಂಟ್ ಗಳನ್ನೇ ಸಿಎಲ್-7 ಕೊಠಡಿಗಳೆಂದು ನೀಲನಕಾಶೆ ತಯಾರಿಸಿರುವುದು, ಬೇರೆ ಕಟ್ಟಡದ ಕಿಚನ್, ರೂಂಗಳು, ಡೈನಿಂಗ್ ಹಾಲ್, ರೆಸ್ಟೋರೆಂಟ್ ಛಾಯಚಿತ್ರ ನೀಡಿರುವುದು, ಪಾರ್ಕಿಂಗ್ ವ್ಯವಸ್ಥೆಗೆ ಕೆರೆ ಜಾಗ ತೋರಿಸಿರುವುದು, ಸುಳ್ಳು ಟ್ರೇಡ್ ಲೈಸೆನ್ಸ್ ಕೊಟ್ಟಿರುವುದು, ಅಸ್ತಿತ್ವದಲ್ಲಿರುವ ಸಿಎಲ್-9 ಕಟ್ಟಡ ಮತ್ತು ಅದರ ವಿಳಾಸವನ್ನು ನಕಲಿ ದಾಖಲೆ ಸೃಷ್ಟಿಸಿ ನೂರಾರು ಸಿಎಲ್-7 ಲೈಸೆನ್ಸ್ ಮಂಜೂರಾತಿ ಮಾಡಿರುವುದು ದೂರುದಾರರು ಉಲ್ಲೇಖಿಸಿದ್ದಾರೆ.
ಅಲ್ಲದೆ, ಕೆಲವೊಮ್ಮೆ ಕಟ್ಟಡಗಳು ಇಲ್ಲದಿದ್ದರೂ ಬೋಗಸ್ ದಾಖಲೆ ಸೃಷ್ಟಿಸಿ ಸಿಎಲ್-7 ಲೈಸೆನ್ಸ್ ನೀಡಲಾಗಿದೆ. ಅಬಕಾರಿ ಉಪ ಆಯುಕ್ತ ಅಜಿತ್‌ಕುಮಾರ್, ಉಪ ಅಧೀಕ್ಷಕ ತುಕಾರಂ ನಾಯಕ್ ಮತ್ತು ನಿರೀಕ್ಷಕ ಭರತ್ ಎಂಬುವರು ಕಾನೂನುಬಾಹಿರವಾಗಿ ಸಿಎಲ್-7 ಲೈಸೆನ್ಸ್ ನೀಡಿದ್ದಾರೆ.ಕೆಲವೆಡೆ ಸಿಎಲ್-7 ಸನ್ನದು ಮಂಜೂರಾಗಿರುವ ಕಟ್ಟಡದಲ್ಲಿರುವ ಸಿಎಲ್-9 ಸನ್ನದುಗಳನ್ನು ಸಿಎಲ್-7 ಸನ್ನದುಗಳು ಮಂಜೂರಾದ ನಂತರ ಬೇರೆ ಕಡೆಗೆ ಸ್ಥಳಾಂತರ ಮಾಡಿ ಆ ಕಟ್ಟಡವನ್ನು ಸಿಎಲ್-7 ಕಟ್ಟಡ ಎಂಬುದಾಗಿ ತೋರಿಸಲಾಗಿದೆ. ಸಿಎಲ್-9 ಕಟ್ಟಡ ಹಾಗೂ ಅದೇ ವಿಳಾಸಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕರಾಮತ್ತು ತೋರಿರುವ ಈ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವರದಿ ಕೊಟ್ಟು ಯಾಮಾರಿಸಿದ್ದಾರೆ. ಮಧ್ಯವರ್ತಿಗಳ ಮೂಲಕ ಪ್ರತಿ ಲೈಸೆನ್ಸ್ ಕೋಟ್ಯಂತರ ರೂ.ಲಂಚ ವಸೂಲಿ ನಡೆದಿದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ. ಈ ಎಲ್ಲ ಸ್ವಾರಾಂಶ ಆಧಾರಿಸಿ ಆರ್ಥಿಕ ಇಲಾಖೆಗೆ ಬರೆದಿರುವ ಪತ್ರದಲ್ಲಿ ಲೋಕಾಯುಕ್ತ ವಿವರಿಸಿದೆ.
ಬೆಂಗಳೂರಲ್ಲೇ ಬಿಡುಬಿಟ್ಟಿರುವ ಉಪ ಆಯುಕ್ತರು
ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತ ಜಿಲ್ಲೆಗಳಲ್ಲೇ ಕೆಲ ಉಪ ಆಯುಕ್ತರು 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ಮತ್ತು ಅದರ ಸುತ್ತಮುತ್ತ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಉಪ ಆಯುಕ್ತರನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಬೇಕೆಂಬ ನಿಯಮ ಇದೆ. ಆದರೆ, ಸಾರ್ವತ್ರಿಕ ವರ್ಗಾವಣೆ ಸೇರಿ ಇತರ ಸಂದರ್ಭದಲ್ಲಿ ಕೆಲ ಉಪ ಆಯುಕ್ತರು ಸಿಂಡಿಕೇಟ್ ಮಾಡಿಕೊಂಡು ಆಯಕಟ್ಟಿನ ಜಾಗಕ್ಕೆ ಕೂರಲು ಕೋಟ್ಯಂತರ ರೂ.ಲಂಚ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಪ ಆಯುಕ್ತರು ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, ಬೆಂಗಳೂರು ನಗರ ವ್ಯಾಪ್ತಿಯ ಅಬಕಾರಿ ವಲಯದಲ್ಲೇ ಉಳಿದುಕೊಳ್ಳಲು ಕೆಲ ಭ್ರಷ್ಟ ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.