ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹುಮನಾಬಾದ್ನಲ್ಲಿ ಶನಿವಾರ ತಾಲೂಕು ಶಾಲಾ- ಕಾಲೇಜು ಆಡಳಿತ ಮಂಡಳಿ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಹಾಗೂ ಒಕ್ಕೂಟದ ಅಧ್ಯಕ್ಷ ಭೀಮರಾವ ಪಾಟೀಲ್, ಪ್ರಮುಖರಾದ ಅಂಕುಶ ಗೋಖಲೆ, ರಮೇಶ ಗಾದಾ, ಬಾಬು ಟೈಗರ್, ರಾಜಕುಮಾರ ಭೂರೇಶ ಇತರರಿದ್ದರು.
- ಹುಮನಾಬಾದ್ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಕೆ
- ಪ್ರಮುಖರು ಭಾಗಿ
ಹುಮನಾಬಾದ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಶಾಲಾ- ಕಾಲೇಜು ಆಡಳಿತ ಮಂಡಳಿ ಒಕ್ಕೂಟದಿಂದ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹಳೇ ತಹಸಿಲ್ ಕಚೇರಿಯಿಂದ ಬಸವೇಶ್ವರ ವೃತ್ತ, ಬಾಲಾಜಿ ವೃತ್ತ, ಸರ್ದಾರ್ ಪಟೇಲ್ ವೃತ್ತ ಮಾರ್ಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲಪ್ರಯೋಗ ನಡೆಸಿ ಅಮಾನವೀಯವಾಗಿ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡದೆ, ನೀಟ್ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಪ್ರಮುಖರಾದ ಅಂಕುಶ ಗೋಖಲೆ, ರಮೇಶ ಗಾದಾ, ಬಾಬು ಟೈಗರ್, ಜಾಕೀರ್ ಹುಸೇನ್ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಿದೆ. ಪ್ರಕರಣದ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.
ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಜಗದೀಶ ಚೌರ್ ಅವರಿಗೆ ಸಲ್ಲಿಸಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಪ್ರಮುಖರಾದ ಸುರೇಶ ಮುಸ್ತರಗಿ, ರಾಜಕುಮಾರ ಭೂರೇಶ, ಮಲ್ಲಿಕಾರ್ಜುನ ಮಾಶೆಟ್ಟಿ, ದತ್ತಕುಮಾರ ಚಿದ್ರಿ, ರುದ್ರಂ ಪಾಟೀಲ್, ಅರುಣ ಕುರ್ಣೆ, ಶಾಂತವೀರ ಯಲಾಲ್, ಎಸ್. ಮರ್ತುಜ್, ಅಫ್ಸರ್ಮಿಯಾ, ಓಂಕಾರ ತುಂಬಾ, ವಿಜಯಕುಮಾರ ನಾತೆ, ಬಾಸಿದ್, ಯಾಸೀನ್ ಇತರರು ಪಾಲ್ಗೊಂಡಿದ್ದರು. ಸಿಪಿಐ ಸಂತೋಷ ತಟೆಪಳ್ಳಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.