ಸಾಂದರ್ಭಿಕ ಚಿತ್ರ 
ರಾಜ್ಯ

ವಿವಾಹಿತ ಸಹೋದರಿಯರಿಗೆ ವಿಮೆ ನಿರಾಕರಿಸುವಂತಿಲ್ಲ

ಬೆಂಗಳೂರು: ವಿವಾಹಿತ ಸಹೋದರಿಯರು ಮೃತನ ಅವಲಂಬಿತರಲ್ಲ ಎಂಬ ಕಾರಣಕ್ಕೆ ವಿಮಾ ಕಂಪನಿಗಳು ಅಪಘಾತ ಪರಿಹಾರ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.
ಬಸ್​ ಅಪಘಾತವೊಂದರಲ್ಲಿ ಮೃತನಾದ ವ್ಯಕ್ತಿಯ ವಿವಾಹಿತ ಸಹೋದರಿಯರನ್ನೂ ಅವಲಂಬಿತರು ಎಂದು ಪರಿಗಣಿಸಿ ಅಪಘಾತ ಪರಿಹಾರ ಹಂಚಿಕೆ ಮಾಡಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದಿ ನ್ಯಾಷನಲ್​ ಇನ್ಶೂರೆನ್ಸ್​ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್​ ಎಂ. ಅಡಿಗ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ವಿವಾಹದ ನಂತರವೂ ತವರಿನೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಕುಟುಂಬದಲ್ಲಿ ಸಂಪಾದಿಸುವ ಸದಸ್ಯರು ಅವರ ಯೋಗಕ್ಷೇಮ ಮತ್ತು ಸಾಮಾಜಿಕ ಅಗತ್ಯಗಳಿಗೆ ಆರ್ಥಿಕ ಕೊಡುಗೆ ನೀಡುವುದು ಸಾಮಾನ್ಯ. ಆದ್ದರಿಂದ ಸಹೋದರಿಯರ ವೈವಾಹಿಕ ಸ್ಥಿತಿಯ ಆಧಾರದ ಮೇಲೆ ಪರಿಹಾರ ಪಡೆಯುವ ಹಕ್ಕನ್ನು ನಿರಾಕರಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಸ್​ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ 2017ರ ಜು.7ರಂದು ಉಡುಪಿಯಲ್ಲಿ ನಡೆದ ಅಪಘಾತದಲ್ಲಿ ಪ್ರೇಮ್​ ಪ್ರಕಾಶ್​ ಮೆನೆಜೆಸ್​ ಎಂಬವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವಿವಾಹಿತರಾಗಿದ್ದ ಅವರಿಗೆ 44 ವರ್ಷ ವಯಸ್ಸಾಗಿತ್ತು. ಮೃತನ ಸಹೋದರ ಮತ್ತು ಇಬ್ಬರು ವಿವಾಹಿತ ಸಹೋದರಿಯರು ಅಪಘಾತ ಪರಿಹಾರಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿ, 10.60 ಲಕ್ಷ ಪರಿಹಾರ ಪಾವತಿಸುವಂತೆ ವಿಮಾ ಸಂಸ್ಥೆಗೆ ಆದೇಶ ನೀಡಿತ್ತು.
ಈ ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ ವಿಮಾ ಸಂಸ್ಥೆ, ಮೃತನ ಸಹೋದರಿಯರು ವಿವಾಹಿತರಾಗಿದ್ದು, ಅವರ ಗಂಡಂದಿರೊಂದಿಗೆ ವಾಸವಿದ್ದಾರೆ. ಆದ್ದರಿಂದ ಅವರನ್ನು ಮೃತನ ಕಾನೂನುಬದ್ಧ ಉತ್ತರಾಧಿಕಾರಿಗಳು ಅಥವಾ ಅವಲಂಬಿತರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು.
ಪ್ರತ್ಯೇಕ ಅರ್ಜಿ ಸಲ್ಲಿಸಿದ್ದ ಮೃತನ ಸಹೋದರಿಯರು, ತಾವು ವಿವಾಹಿತರಾಗಿರುವುದರಿಂದ ಸಹೋದರನ ಗಳಿಕೆಯ ಮೇಲೆ ಅವಲಂಬಿತರಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ತಮ್ಮ ಮೃತ ಸಹೋದರ ಕುಟುಂಬ ನಿರ್ವಹಣೆಗೆ ಸಹಾಯ ಮಾಡುತ್ತಿದ್ದರು. ಇದನ್ನು ಸುಳ್ಳು ಎಂದು ಸಾಧಿಸಲು ವಿಮಾ ಕಂಪನಿ ಯಾವುದೇ ಆಧಾರ ಒದಗಿಸಿಲ್ಲ ಎಂದು ವಾದಿಸಿದರು.

ಪರಿಹಾರ ಮೊತ್ತ ಹೆಚ್ಚಳ

ವಿಚಾರಣಾ ನ್ಯಾಯಾಲಯವು ಮೃತನ ತಿಂಗಳ ಗಳಿಕೆಯನ್ನು ಕಡಿಮೆ ಅಂದಾಜಿಸಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್​, ರಾಜ್ಯ ಕಾನೂನು ಆಯೋಗ ಸಿದ್ಧಪಡಿಸಿದ ಹೊಸ ಆದಾಯ ಚಾರ್ಟ್​ ಅನ್ನು ಪರಿಗಣಿಸಿ ಹೆಚ್ಚುವರಿ 2.45 ಲಕ್ಷ ರೂ. ಸೇರಿಸಿ ಪರಿಹಾರ ಮೋತ್ತವನ್ನು ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಿದೆ.

ಸಹೋದರಿಯರ ಹೇಳಿಕೆಗಳನ್ನು ನಂಬದಿರಲು ಯಾವುದೇ ಪುರಾವೆಗಳಿಲ್ಲ ಎಂದ ನ್ಯಾಯಪೀಠ, ವಿವಾಹಿತ ಗಂಡು, ಹೆಣ್ಣು ಮಕ್ಕಳು, ಸಹೋದರ ಮತ್ತು ಸಹೋದರಿಯನ್ನು ಕೂಡ ಅವಲಂಬಿತರೆಂದು ಪರಿಗಣಿಸಬಹುದು ಎಂದು ಸುಪ್ರೀಕೋರ್ಟ್​ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತು.