ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಜಾಲ ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಪ್ರತಿಷ್ಠಿತ ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳ ನೇಮಕಾತಿಯಲ್ಲೂ ಲಂಚ, ರಾಜಕೀಯ ಪ್ರಭಾವ ಹಾಗೂ ಮಠಾಧೀಶರ ಶಿಫಾರಸುಗಳನ್ನು ಒಳಗೊಂಡ ಮೂರು ಷರತ್ತುಗಳ ವ್ಯವಸ್ಥೆ ಜಾರಿಯಲ್ಲಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೂ ಮುನ್ನ ಅಥವಾ ಸಂದರ್ಶನದ ಸಂದರ್ಭದಲ್ಲಿ ಸಂಪರ್ಕಿಸುತ್ತಿದ್ದ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಅವರೊಂದಿಗೆ ಗುರುತಿಸಿಕೊಂಡಿದ್ದ ಪ್ರಭಾವಿಗಳ ಗುಂಪು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಅರ್ಹತೆ ಇದ್ದರೂ ಅಭ್ಯರ್ಥಿಗಳು ಈ ಪ್ರಭಾವಿಗಳ ಷರತ್ತುಗಳಿಗೆ ಒಳಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ಅಂಶ ತನಿಖಾ ವಲಯದಲ್ಲಿ ಚರ್ಚೆಗೆ ಬಂದಿದೆ.
ಎರಡು ಕೋಟಿ ರೂ. ಲಂಚಕ್ಕೆ ಬೇಡಿಕೆ:
ಕೆಎಎಸ್ ಹುದ್ದೆಗೆ ಆಯ್ಕೆಯಾಗುವ ಅರ್ಹತೆ ಹೊಂದಿದ್ದ ಅಭ್ಯರ್ಥಿಗಳನ್ನು ಸಂದರ್ಶನದ ಸಂದರ್ಭದಲ್ಲಿ ಸಂಪರ್ಕಿಸಿ, ತಹಸೀಲ್ದಾರ್ ಅಥವಾ ಡಿವೈಎಸ್ಪಿ ಶ್ರೇಣಿಯ ಹುದ್ದೆ ಕೊಡಿಸಲು ಸುಮಾರು 2 ಕೋಟಿ ರೂ. ನೀಡುವಂತೆ ಬೇಡಿಕೆ ಇಡಲಾಗುತ್ತಿತ್ತು ಎಂಬ ಆರೋಪವಿದೆ.
ಇಷ್ಟು ದೊಡ್ಡ ಮೊತ್ತ ಪಾವತಿಸಲು ಹಿಂದೇಟು ಹಾಕುವ ಅಭ್ಯರ್ಥಿಗಳಿಗೆ ಪರ್ಯಾಯ ಷರತ್ತುಗಳನ್ನು ವಿಧಿಸಲಾಗುತ್ತಿತ್ತು ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದರೂ ಆಯೋಗದ ಪ್ರಭಾವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದ ಅಭ್ಯರ್ಥಿಗಳಿಗೆ ಆಯ್ಕೆಯ ಹಾದಿ ಕಠಿಣವಾಗುತ್ತಿತ್ತು.
ರಾಜಕೀಯ ನಂಟಿರುವ ಕುಟುಂಬಗಳೊಂದಿಗೆ ವಿವಾಹದ ಷರತ್ತು!
ಎರಡನೇ ಷರತ್ತು ಇನ್ನಷ್ಟು ಅಚ್ಚರಿ ಮೂಡಿಸಿದೆ. ಕೆಪಿಎಸ್ಸಿ ಅಧ್ಯಕ್ಷರು ಹಾಗೂ ಸದಸ್ಯರಾಗಿ ನೇಮಕವಾಗುವವರು ರಾಜಕೀಯ ಮುಖಂಡರು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ನಂಟು ಹೊಂದಿದವರಾಗಿದ್ದಾರೆ.
ಇಂತಹ ಪ್ರಭಾವಿಗಳ ಕುಟುಂಬದ ಸದಸ್ಯರು ಅಥವಾ ಮಕ್ಕಳನ್ನು ವಿವಾಹವಾಗುವ ಅಭ್ಯರ್ಥಿಗಳಿಗೆ ಕೆಎಎಸ್ ಹುದ್ದೆ ಕೊಡಿಸುವ ವ್ಯವಸ್ಥೆಯೂ ಇತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹಣ ನೀಡಲು ಅಥವಾ ಇಂತಹ ವಿವಾಹದ ಪ್ರಸ್ತಾಪಕ್ಕೆ ಒಪ್ಪದ ಅಭ್ಯರ್ಥಿಗಳ ಆಯ್ಕೆಗೆ ಅಡ್ಡಿಯಾಗುತ್ತಿತ್ತು ಎನ್ನಲಾಗಿದೆ.
ಮಠಾಧೀಶರ ಮೂಲಕ ಶಿಫಾರಸು:
ಮೂರನೇ ಷರತ್ತು ಧಾರ್ಮಿಕ ಪ್ರಭಾವಕ್ಕೆ ಸಂಬಂಧಿಸಿದ್ದಾಗಿದೆ. ರಾಜ್ಯದ ಪ್ರಭಾವಿ ಸ್ವಾಮೀಜಿ ಅಥವಾ ಮಠಾಧೀಶರ ಮೂಲಕ ಕೆಪಿಎಸ್ಸಿ ಅಧ್ಯಕ್ಷರ ಮೇಲೆ ಒತ್ತಡ ತಂದು ಶಿಫಾರಸು ಮಾಡಿಸಿದರೆ ಅಭ್ಯರ್ಥಿಗಳ ಹೆಸರು ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿತ್ತು.
ಈ ಮೂರು ಮಾರ್ಗಗಳ ಮೂಲಕ ಕೆಎಎಸ್ ನೇಮಕಾತಿಯಲ್ಲಿ ಅರ್ಹತೆಗಿಂತ ಹಣ, ರಾಜಕೀಯ ಸಂಬಂಧ ಹಾಗೂ ಪ್ರಭಾವಕ್ಕೆ ಆದ್ಯತೆ ನೀಡಲಾಗುತ್ತಿತ್ತು ಎಂಬ ಸಂಗತಿಯನ್ನು ಐಪಿಎಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಒಟ್ಟಾರೆ, ಕೆಪಿಎಸ್ಸಿಯ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳು ಕೇವಲ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಮೌಲ್ಯಮಾಪನದ ಅಕ್ರಮಗಳಿಗೆ ಸೀಮಿತವಾಗಿರದೆ, ಉನ್ನತ ಹುದ್ದೆಗಳ ಆಯ್ಕೆಯನ್ನೇ ಪ್ರಭಾವಿಸುವ ವ್ಯವಸ್ಥಿತ ಜಾಲದ ಆರೋಪಗಳತ್ತ ತನಿಖೆಯ ಗಮನ ಸೆಳೆದಿವೆ.
ಕೆಪಿಎಸ್ಸಿ ಹಗರಣವನ್ನು ಕೇಂದ್ರ ಸರ್ಕಾರದ ಒಂದು ಸಂಸೆ ್ಥ(ಇ.ಡಿ) ಹಾಗೂ ರಾಜ್ಯ ಸರ್ಕಾರದ ಎರಡು ತನಿಖಾ ಸಂಸ್ಥೆಗಳು (ಎಸ್ಐಟಿ, ಸಿಐಡಿ) ತನಿಖೆ ನಡೆಯುತ್ತಿದೆ. ಈ ಮೂರು ಸಂಸ್ಥೆಗಳಿಂದ ಕೆಎಎಸ್ ಪರೀಕ್ಷೆಯಲ್ಲಿ ಈ ಹಿಂದೆ ನಡೆದಿರುವ ಅಕ್ರಮ, ಮೂರು ಷರತ್ತಿನೊಂದಿಗೆ ಹುದ್ದೆ ಹಂಚಿಕೆ ಬೆಳಕಿಗೆ ಬರಕಿದೆ ಅಷ್ಟೇ.
ಸಾಮಾನ್ಯವಾಗಿ ಆಯೋಗದ ಅಧ್ಯಕ್ಷರನ್ನು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷದ ನಾಯಕರು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಇದರಿಂದ ಕೆಪಿಎಸ್ಸಿಗೆ ವರ್ಗಾವಣೆಯಾಗಿ ಬರುವ ಐಎಎಸ್ ಅಧಿಕಾರಿ, ಕಾರ್ಯದರ್ಶಿಗಳು, ಪರೀಕ್ಷಾ ನಿಯಂತ್ರಕರು ಸೇರಿ ವಿವಿಧ ವಿಭಾಗದ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು. ಯುಪಿಎಸ್ಸಿ ಕೈಗೊಳ್ಳುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿ ಬಂದಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಆಯೋಗದ ಅಧ್ಯಕ್ಷರು, ಸದಸ್ಯರೊಂದಿಗೆ ಸೇರಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಕಷ್ಟಪಟ್ಟು ರಾತ್ರಿ ಹಗಲು ಓದಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ನೋವು ಅರಿಯದೆ ಭ್ರಷ್ಟಾಚಾರದಲ್ಲಿ ತೋಡಗಿರುವ ಜ್ಞಾನೇಂದ್ರ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಆಯೋಗದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಇಂದು ನಾಳೆಯದಲ್ಲ. ದಶಕಗಳಿಂದ ಈ ರೀತಿಯ ವ್ಯವಸ್ಥೆ ನಡೆದುಕೊಂಡು ಬಂದಿದೆ. ಆದರೆ, 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಿಂದ ಈ ಹಗರಣ ಬೆಳಕಿಗೆ ಬಂದಿದೆ. ಇದಕ್ಕೂ ಮುನ್ನ ಅಂದರೆ, ಓಎಂಆರ್, ಸಿಸಿ ಕ್ಯಾಮೆರಾ ಕಣ್ಗಾವಲು ಬರುವುದಕ್ಕೂ ಮುನ್ನವೇ ಹಲವು ಅಕ್ರಮಗಳು ಕೆಪಿಎಸ್ಸಿಯಲ್ಲಿ ನಡೆದು ಹೋಗಿವೆ.