ಶಾಸಕ ಬಿ.ಶಿವಣ್ಣ ದಾಖಲೆಯ ಪತ್ರಗಳನ್ನು ರೈತರಿಗೆ ನೀಡಿದರು. 
ರಾಜ್ಯ

ಮರಸೂರು, ಮಡಿವಾಳ ರೈತರಿಗೆ ಕೊನೆಗೂ ಸಿಕ್ಕ ಕಂದಾಯ ದಾಖಲೆ / ANEKAL

ಆನೇಕಲ್​ :

ತಾಲೂಕಿನ ಮರಸೂರು ಹಾಗೂ ಮರಸೂರು ಮಡಿವಾಳ ಗ್ರಾಮದ ಕಂದಾಯ ದಾಖಲೆಗಳನ್ನು ಸರ್ಕಾರದ ಆದೇಶದಂತೆ ಮರುಸೃಷ್ಟಿಸಿ ಅರ್ಹ 250ಕ್ಕೂ ಹೆಚ್ಚು ಫಲಾನುಭವಿಗಳಿಗೆ ಆನೇಕಲ್​ ೇತ್ರದ ಶಾಸಕ ಬಿ.ಶಿವಣ್ಣ ಹಸ್ತಾಂತರಿಸಿದರು. ಇದೇ ವೇಳೆ ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿಪೂಜೆ, ಸರ್ಕಾರಿ ಶಾಲೆಯ ನೂತನ ಬಸ್​ಗೆ ಚಾಲನೆ ನೀಡಲಾಯಿತು.

ಮರಸೂರು ಗ್ರಾಪಂ ವ್ಯಾಪ್ತಿಯ ಮರಸೂರು ಮಡಿವಾಳ ಗ್ರಾಮದ ಬಂಡಿ ಮಹಾಕಾಳಿ ದೇವಾಲಯದ ಆವರಣದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ತಾಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ ಕಂದಾಯ ದಾಖಲೆಗಳ ಹಸ್ತಾಮತರ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಮರಸೂರು ಗ್ರಾಮದ ರೈತರ ಜಮೀನುಗಳಿಗೆ ಸಂಬಂಧಿಸಿದ ಆಕಾರ್​ ಬಂದ್​ ಹಾಗೂ ಸರ್ವೇ ದಾಖಲೆಗಳ ಮರುಸೃಷ್ಟಿ ಪೂರ್ಣಗೊಂಡಿದೆ. ಈ ಹಿಂದೆ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳು, ಕಂದಾಯ ವ್ಯವಹಾರ, ಸರ್ವೇ ಕಾರ್ಯ, ಜಮೀನು ದಾಖಲೆ ತಿದ್ದುಪಡಿ ಸೇರಿ ವಿವಿಧ ಸರ್ಕಾರಿ ಕೆಲಸಗಳಿಗೆ ರೈತರು ತಮಿಳುನಾಡಿಗೆ ಹೋಗಬೇಕಿತ್ತು. ದಾಖಲೆಗಳ ಕೊರತೆಯಿಂದ ಪಹಣಿ, ಸರ್ವೇ ಹಾಗೂ ಕಂದಾಯ ದಾಖಲೆಗಳಿಗೆ ಸಂಬಂಧಿಸಿದ ಕೆಲಸಗಳು ವಿಳಂಬವಾಗುತ್ತಿದ್ದವು. ರೈತರ ಬಹುದಿನಗಳ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಸರ್ವೇ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಸ್ಥಳಿಯ ರೈತ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ವಿಶೇಷ ಅಭಿಯಾನ ಕೈಗೊಂಡು ದಾಖಲೆಗಳನ್ನು ಮರುಸೃಷ್ಟಿಸಿದ್ದಾರೆ ಎಂದರು.

ದಾಖಲೆಗಳ ಪುನರ್ನಿರ್ಮಾಣಕ್ಕೆ ಶ್ರಮಿಸಿದ ಹಿರಿಯರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಮರಸೂರು ಗ್ರಾಪಂನಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಕಿಟ್​, ಹಾಲು ಉತ್ಪಾದನೆಗೆ ಉತ್ತೇಜನ ನೀಡಲು ದನಗಳನ್ನು ನೀಡಲಾಯಿತು.

ತಹಸೀಲ್ದಾರ್​ ಶಶಿಧರ್​ ಮಾಡ್ಯಾಳ್​, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಿ.ಮದನ್​, ಇಒ ಎ.ಎನ್​.ಬೈರಪ್ಪ, ಸೂರ್ಯನಗರ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಚಂದ್ರಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯ ಮರಸೂರು ಪುರುಷೋತ್ತಮ್​ ರೆಡ್ಡಿ, ಮರಸೂರು ಗ್ರಾಪಂ ಆಡಳಿತಾಧಿಕಾರಿ ನಾಗರಾಜ್​, ಪಿಡಿಒ ಮುರಳಿ, ಬಂಡಾಪುರ ರಾಮಚಂದ್ರ, ಶೆಟ್ಟಹಳ್ಳಿ ಪ್ರಭಾಕರ್​ ರೆಡ್ಡಿ, ರಾಮಕೃಷ್ಣಾರೆಡ್ಡಿ, ಮುಖಂಡರಾದ ರಮೇಶ್​, ನಾರಾಯಣಸ್ವಾಮಿ, ಪುಷ್ಪರಾಜ್​, ಶ್ರೀನಿವಾಸ್​ ರೆಡ್ಡಿ, ಸುರೇಶ್​, ಪೋತ ಇತರರು ಇದ್ದರು.