uttarayana 
ರಾಜ್ಯ

ಉತ್ತರಾಯಣದಲ್ಲಿ ಹಲವು ವಿಸ್ಮಯಗಳು ಗೋಚರ

ರಾಜಗುರು ಬಿ ಎಸ್​ ದ್ವಾರಕಾನಾಥ

ಜಗತ್ತಿನ ಎಲ್ಲ ಆಗುಹೋಗುಗಳಿಗೆ ನವಗ್ರಹಗಳ ಚಲನೆ ಕಾರಣ. ಅಂತಹ ಎಲ್ಲ ಗ್ರಹಗಳ ಶಕ್ತಿ ಸಂಚಯವಾದ ಸೂರ್ಯ ಭಗವಂತ ಪಥ ಬದಲಿಸುವ ಉತ್ತರಾಯಣ ಕಾಲವು ಹಲವು ಬದಲಾವಣೆಗಳಿಗೂ ಕಾರಣವಾಗಲಿದೆ. ಮಕರ ಸಂಕ್ರಾಂತಿಯ ಪರ್ವ ಕಾಲದಲ್ಲಿ ಜಗತ್ತಿನ ಆಗುಹೋಗುಗಳು, ವಿಷಯ, ವಿಸ್ಮಯಗಳ ಒಂದು ವಿಸõತ ಮುನ್ನೋಟ ಇಲ್ಲಿದೆ.
ಚರಾಚರ ಜಗತ್ತಿನ ಪ್ರಾಣಿ ಪಕ್ಷಿಗಳಿಂದ ಹಿಡಿದು, ಗಿಡ ಮರಗಳು, ಎಲ್ಲ ಜೀವಿ, ವಸ್ತುಗಳಿಗೂ ಶಕ್ತಿಯನ್ನು ಕೊಟ್ಟು ಕಾಪಾಡುವ ಕಶ್ಯಪ ಮಹರ್ಷಿಗಳ ಪುತ್ರನಾದ ಸೂರ್ಯನಾರಾಯಣನು ಎಲ್ಲ ಲೋಕಗಳ ಕತ್ತಲೆಯನ್ನು ಹೊಡೆದೋಡಿಸಿ ಜಗತ್ತಿನ ಉಪಕಾರಾರ್ಥವಾಗಿ ಆದಿತ್ಯಾತ್ಮಕ ರುದ್ರನಾಗಿ ಈ ಭೂಮಂಡಲವನ್ನು ರಕ್ಷಿಸುತ್ತಿದ್ದಾನೆ. ಹಗಲಲ್ಲಿ ಸೂರ್ಯನ ಬೆಳಕು, ರಾತ್ರಿಯಲ್ಲಿ ಚಂದ್ರನ ಶಶಿಕಿರಣಗಳಿಲ್ಲದೆ ಜಗತ್ತಿನ ಜೀವರಾಶಿಗಳು ಬದುಕುವುದು ಅಸಾಧ್ಯ. ಅಂತಹ ಸೂರ್ಯ ವರ್ಷದಲ್ಲಿ ಎರಡು ಬಾರಿ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. 
ಮಕರ ಸಂಕ್ರಾಂತಿಯು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ಪುಣ್ಯಕಾಲ. ಸಾಮಾನ್ಯವಾಗಿ ಮಕರ ಸಂಕ್ರಾಂತಿ ಜ.14ರಂದು ಬರುತ್ತದೆ. ಈ ಬಾರಿ ಜ.14ರ ಮಧ್ಯಾಹ್ನ 3.06 ನಿಮಿಷಕ್ಕೆ ಮಕರ ಸಂಕ್ರಮಣ ಪುಣ್ಯಕಾಲ ಆರಂಭವಾಗಿದ್ದು, ಪಂಚಾಂಗದ ಪ್ರಕಾರ ಜ.15ರಂದು ಹಬ್ಬ ಆಚರಿಸುವುದು ಸರಿಯಾದ ಕ್ರಮ. 
ಸೂರ್ಯನ ಆರಾಧನೆ ಹಿಂದಿನ ಸತ್ಯ ಆರೋಗ್ಯ ವರ್ಧನೆ. ‘ಆರೋಗ್ಯಂ ಭಾಸ್ಕರಾತ್ ಇಚೇತ್’ ಎಂಬ ಉಕ್ತಿಯಂತೆ ಮನುಷ್ಯನು ಆರೋಗ್ಯವಂತನಾಗಿ ಸದೃಢ, ವಜ್ರಕಾಯವನ್ನು ಹೊಂದಲು ಸೂರ್ಯ ಭಗವಂತನ ಪ್ರಾರ್ಥನೆ ಮತ್ತು ಪೂಜೆ ಅತ್ಯವಶ್ಯಕ. ಅಂತಹ ಸೂರ್ಯನ ಅರ್ಚನೆಗೆ ಸಂಕ್ರಾಂತಿ ಶ್ರೇಷ್ಠ ಕಾಲ. ಸೂರ್ಯನನ್ನು ಭಕ್ತಿಯಿಂದ ಪೂಜಿಸುವವರಿಗೆ ಯಾವ ರೋಗವೂ ಬರುವುದಿಲ್ಲ. ಮಕರ ಸಂಕ್ರಾಂತಿಯಂದು ಸಮುದ್ರ ಸ್ನಾನ, ಸಂಗಮ ಸ್ನಾನ, ನದಿಸ್ನಾನ, ಎಳ್ಳು ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದನ್ನು ಶಾಸ್ತ್ರಗಳಲ್ಲಿ ಹೇಳಿದ್ದಾರೆ. ಸರ್ವ ಪಾಪ ಪರಿಹಾರಕ್ಕೆ ತಿಲ ಹೋಮ, ಪಿತೃಗಳಿಗೆ ತಿಲ ತರ್ಪಣ, ತಿಲಭಕ್ಷ್ಯ (ಎಳ್ಳು ಉಂಡೆ ಅಥವಾ ಎಳ್ಳು-ಬೆಲ್ಲ) ಹಾಗೂ ತಿಲ ದಾನ ಮಾಡುವುದರಿಂದ ಜ್ಞಾತ ಮತ್ತು ಅಜ್ಞಾತ ಯಾವುದೇ ಪಾಪಗಳಿದ್ದರೂ ಪರಿಹಾರವಾಗಿ ಜೀವನದಲ್ಲಿ ಸುಖದಿಂದ ಇರಬಹುದು. ಸೂರ್ಯನಿಗೆ ಅಕ್ಕಿ ಹಿಟ್ಟು, ಬೆಲ್ಲ, ತುಪ್ಪ ಕಲಸಿ ನೈವೇದ್ಯ ಮಾಡಬೇಕು. 
ಸಂಕ್ರಾಂತಿಯ ಪ್ರಭಾವ ಮತ್ತು ಪರಿಣಾಮ: ಈ ಸಂವತ್ಸರದಲ್ಲಿ ಸಂಕ್ರಮಣ ದೇವತೆಯು ಹುಲಿಯ ವಾಹನದ ಮೇಲೆ ಕುದುರೆಸಹಿತವಾಗಿ, ಹಳದಿವಸ್ತ್ರವನ್ನು ಧರಿಸಿ, ಕೈಯಲ್ಲಿ ಗದೆಯನ್ನು ಹಿಡಿದು ಕೇಸರ ತಿಲಕವನ್ನಿಟ್ಟು, ಕೌಮಾರಿಯಾಗಿ ಪಾಯಸವನ್ನು ಭಕ್ಷಣೆ ಮಾಡುತ್ತಾ, ಮೈಕಾಂತಿಗೂ, ಸುವಾಸನೆಗೂ ಮಲ್ಲಿಗೆಯನ್ನು ಹಿಡಿದು, ಸರ್ಪಜಾತಿಯ ಮುತ್ತನ್ನು ಧರಿಸಿ ವಾರ, ನಾಮ, ನಕ್ಷತ್ರ ಮಂದಾಕಿನಿಯಾಗಿ ಪೂರ್ವದ ಕಡೆಯಿಂದ ವಾಯುವ್ಯದ ಕಡೆ ನೋಡುತ್ತಾ ಪಶ್ಚಿಮದ ಕಡೆ ಹೋಗುತ್ತಿರುವುದರಿಂದ ದೇಶದಲ್ಲಿ ಹತ್ತು ಹಲವು ಭೀತಿಗಳನ್ನು ಹುಟ್ಟುಹಾಕಿದೆ. ದಂತದವನ, ಕಠಿಣ ಮಾತು, ನಿಷ್ಠುರತೆ, ಕಾಮಾಸಕ್ತರಾಗುವುದು, ಅನ್ಯರಿಗೆ ಪೀಡಿಸುವುದು, ಕೊಲೆಗಾರರು, ದೇಶ-ಧರ್ಮ ಹಾಳು ಮಾಡುವವರನ್ನು ಸೂರ್ಯದೇವನ ಅಪ್ಪಣೆ ಪಡೆದು ದಂಡಿಸದೆ ಬಿಡುವುದಿಲ್ಲ. 
ಬಂಗಾಳಕೊಲ್ಲಿಯಲ್ಲಿ ಸಮುದ್ರ ಉಕ್ಕಲಿದೆ. ಅಧಿದೇವತೆಯಾದ ಕಾಳಿಕಾದೇವಿಯು ಕ್ಷುದ್ರಳಾಗಿ ಯುದ್ಧಭೀತಿ, ಕಳ್ಳಕಾಕರ ಹಾವಳಿ, ಅನ್ಯ ದೇಶದ ಗಲಭೆಕೋರರು ಒಳನುಸುಳುವುದು, ಭಾರತದ ಶಾಂತಿ ಭಂಗಗೊಳಿಸುವ ಯತ್ನ, ನೂರಾರು ಸಾವು-ನೋವು ಆಗುವ ಸಾಧ್ಯತೆ ಇದೆ. ಸನಾತನ ಧರ್ಮವನ್ನು ತುಳಿದು ರಾಜ್ಯಭಾರ ಮಾಡುವ ದುರುಳರಿಗೆ ಭಗವಂತನೇ ಸಾಕ್ಷಾತ್ಕಾರದ ಉತ್ತರ ಕೊಡಲು ಚಂಡಮಾರುತ, ಗುಡ್ಡಕುಸಿತ, ಹಿಮಪರ್ವತ ಕುಸಿತ, ಸೂರ್ಯನ ತಾಪ ಹೆಚ್ಚಾಗುವುದು, ಮಳೆ ಹೆಚ್ಚಾಗಿ ಬೆಳೆ ನಾಶ, ಹೊರದೇಶಗಳಲ್ಲಿರುವವರು ಉದ್ಯೋಗ ಕಳೆದುಕೊಂಡು ದೇಶಕ್ಕೆ ಹಿಂದಿರುಗಿ ಉದ್ಯೋಗಕ್ಕಾಗಿ ಪರಿತಪಿಸುವುದು ಮತ್ತಿತರ ಅಪಾಯಗಳು ಸಂಭವಿಸುವ ಲಕ್ಷಣ ಇವೆ.
ಪರಾಭವ ಸಂವತ್ಸರದಲ್ಲಿ ಕಾದಿವೆ ಅಪಾಯ: ಸಂಕ್ರಾಂತಿಯಾಗಿ ಕೇವಲ 15 ದಿನದಲ್ಲಿ ಫೆ. 2ರಂದು ಸೂರ್ಯನು ಶುಕ್ರ ಸಮೇತನಾಗಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಅದೇ ಮನೆಯಲ್ಲಿ ರಾಹು ಇರುವುದರಿಂದ ಎಲ್ಲ ಗ್ರಹಗಳು ರಾಹು-ಕೇತು ಮಧ್ಯ ಸೇರಿ ಜನರಿಗೆ ರೋಗ ಭೀತಿ, ಯುದ್ಧ ಭಯ, ಮಾ.14ರವರೆಗೆ ರಾಷ್ಟ್ರವ್ಯಾಪಿ ಒಂದು ರೀತಿಯ ಕಠಿಣ ಪರಿಸ್ಥಿತಿ ತಲೆದೋರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಆಸ್ಪತ್ರೆಗಳು, ಚಿಕಿತ್ಸಾ ಉಪಕರಣ, ಔಷಧಿಗಳ ಸಂಗ್ರಹ ಮತ್ತು ಎಲ್ಲ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ನಿರ್ಧರಿಸುವುದು ಸೂಕ್ತ. 
ಮಾ.19ರಿಂದ ಪರಾಭವ ನಾಮ ಸಂವತ್ಸರ ಆರಂಭವಾಗಲಿದ್ದು, ಹೆಸರೇ ಹೇಳುವಂತೆ ಅಪಜಯವೇ ಹೆಚ್ಚಾಗಿದೆ.
 ರಾಹು-ಕೇತುಗಳು ಮಧ್ಯೆ ಇರುವ ಗ್ರಹಗಳು ಮನುಷ್ಯನ ಊಹೆಗೂ ನಿಲುಕದ ಕಂಟಕಗಳನ್ನು ದೇಶಕ್ಕೆ ತಂದೊಡ್ಡುವ ಭೀತಿ ಇದೆ. ಜ.15ರಿಂದ ಗುರುವು ಜೂ.1ರಂದು ಕರ್ಕಾಟಕ ರಾಶಿಗೆ ಹೋಗುವತನಕ ಎಲ್ಲ ರಾಜ್ಯಗಳಲ್ಲೂ ಏರುಪೇರುಗಳಿರಲಿವೆ. ಚುನಾವಣೆಗಳಿರುವ ದಕ್ಷಿಣದ ರಾಜ್ಯದಲ್ಲೂ ಅಶಾಂತಿ, ಪಶ್ಚಿಮ ಬಂಗಾಳದಲ್ಲಿ ರಕ್ತಪಾತ, ಹೀನ ಜನರಿಂದ ಹೆಣ್ಣುಮಕ್ಕಳಿಗೆ ಪೀಡೆ, ದೇಶದ ಪ್ರಧಾನಿಗಳು ಬೇಹುಗಾರಿಕೆ ಕಣ್ಣುತಪ್ಪಿಸಿ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ದೇಶಕ್ಕೆ ಸಮರ್ಥ ನಾಯಕನ ಅಗತ್ಯವಿದ್ದು ನಾಯಕನಿಲ್ಲದ ದೇಶವಾಗಬಾರದು. ಧರ್ಮ-ದೇಶವನ್ನು ಸಮಾನವಾಗಿ ಕಾಣುವವರನ್ನು ದೇವರೇ ಮುಂದುವರೆಸುತ್ತಾನೆ. 
ದುಷ್ಟರಿಗಿಂತ ದುಷ್ಟಗುಣದ ಸಂಹಾರ ಅಗತ್ಯ: ರಾಮಾಯಣದಲ್ಲಿ ಅತ್ಯಂತ ಬಲಿಷ್ಠನಾಗಿದ್ದ ರಾವಣನನ್ನು ಶ್ರೀರಾಮ ಸಂಹರಿಸಿದ್ದು ಎಲ್ಲರಿಗೂ ಗೊತ್ತಿದೆ. ಸ್ವತಃ ಬ್ರಹ್ಮದೇವನು ರಾಮನಿಗೆ ಒಂದು ಎಚ್ಚರಿಕೆಯ ಮಾತನ್ನು ಹೇಳುತ್ತಾನೆ. ‘ನೀನು ರಾವಣನನ್ನು ಸಂಹರಿಸಿದ ನಂತರ ಆತನ ಆತ್ಮ ನೀನು ಬಿಟ್ಟ ಬಾಣದ ಮೂಲಕ ಮರಳಿ ನಿನ್ನ ಬತ್ತಳಿಕೆಯನ್ನು ಸೇರೀತು ಜೋಕೆ’ ಎಂದು. ಆಗ ಶ್ರೀರಾಮಚಂದ್ರ ಒಂದು ಅದ್ಭುತ ಮಾತನ್ನು ಹೇಳುತ್ತಾನೆ. ‘ನಾನು ರಾವಣನನ್ನು ಸಂಹರಿಸುವುದಿಲ್ಲ. ಬದಲಾಗಿ ರಾವಣನಲ್ಲಿರುವ ರಾಕ್ಷಸೀ ಗುಣವನ್ನು ಸಂಹರಿಸುತ್ತೇನೆ’ ಎಂದು. ಇದರರ್ಥ ದುಷ್ಟರು, ಶತ್ರುಗಳ ಸಂಹಾರಕ್ಕಿಂತ ಅವರಲ್ಲಿರುವ ಮೃಗೀಯ ಗುಣದ ಸಂಹಾರವಾಗಬೇಕು. ಅಂತಹ ಪರ್ವ ಕಾಲವೇ ಮಕರ ಸಂಕ್ರಮಣ. 
ದೇಶದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು. ವಿಶೇಷವಾಗಿ ಈ ವರ್ಷ ಕ್ರೀಡೆ, ಪತ್ರಿಕೋದ್ಯಮ, ಭಾರತೀಯ ಸೇನೆ, ರೈತರು, ಸಂಶೋಧನೆ, ವಿಜ್ಞಾನ, ಗಣಿತ ಶಾಸ್ತ್ರ, ಬಾಹ್ಯಾಕಾಶ ಕ್ಷೇತ್ರಗಳಿಂದ ದೇಶಕ್ಕೆ ಉತ್ತಮ ಕೊಡುಗೆ ದೊರೆಯಲಿದೆ. 
ಚಂದ್ರಗ್ರಹಣದಿಂದ ಹಲವು ದೋಷ: ಇದೇ ಮಾ. 3ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಭಾರತಕ್ಕೆ ಈ ಗ್ರಹಣ ಗೋಚರಿಸುವುದರಿಂದ ಗ್ರಹಣದ ಪ್ರಭಾವವಿದೆ. ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ ವಿವಿಧ ಪೀಡೆ, ಅಶಾಂತಿಯ ವಾತಾವರಣ, ಆಕಾಶದಲ್ಲಿ ಹವಾಮಾನ ಬದಲಾವಣೆಯಿಂದ ಉಸಿರಾಟದ ತೊಂದರೆ, ಶ್ವಾಸಕೋಶದ ಕಾಯಿಲೆಗಳು ಉಲ್ಬಣಿಸಲಿವೆ. ಅದರಲ್ಲೂ ಮಂಗಳವಾರದ ಶುಕ್ಲ ಪೂರ್ಣಿಮೆಯಂದು ಚಂದ್ರಗ್ರಹಣ ಸಂಭವಿಸುವುದರಿಂದ ಎಲ್ಲರೂ ದೇವರ ಪ್ರಾರ್ಥನೆಯನ್ನು ಮಾಡಬೇಕು. ವಿಶೇಷವಾಗಿ ಹುಬ್ಬ ನಕ್ಷತ್ರ, ಸಿಂಹ ರಾಶಿಯವರು ಕೇತು, ಚಂದ್ರನಿಗೆ ಪ್ರಾರ್ಥನೆ ಸಲ್ಲಿಸಿ ಉಮಾ ಮಹೇಶ್ವರ ದೇವರನ್ನು ಪೂಜಿಸಬೇಕು.
ಬೆಂಗಳೂರಿನಲ್ಲಿ ಕೇವಲ 19 ನಿಮಿಷಗಳು ಮಾತ್ರ ಗ್ರಹಣ ಗೋಚರಿಸಲಿದೆ. ಗ್ರಹಣ ಮೋಕ್ಷ ಇಲ್ಲಿ ಕಾಣದಿರುವುದರಿಂದ ಲಘುವಾಗಿ ದೇವರ ಪ್ರಾರ್ಥನೆ ಹಾಗೂ ತರ್ಪಣ ನೀಡಿ ಪುಣ್ಯ ವೃದ್ಧಿ ಮಾಡಿಕೊಳ್ಳಬೇಕು.