‘ಇಂದಿರಾ ಕಿಟ್’ ಕಾರ್ಯಕ್ರಮ 
ರಾಜ್ಯ

ಇಂದಿರಾ ಕಿಟ್ ವಿತರಣೆಗೆ ಹಲವು ಸವಾಲು-Indira kit

ಹರೀಶ್​​ ಕೆ.ಸಿ.
ಬೆಂಗಳೂರು: ಅನ್ನಭಾಗ್ಯ’ ಯೋಜನೆಯಡಿ ಅಕ್ಕಿ ಬದಲು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಪೋಷಕಾಂಶ ಪದಾರ್ಥ ವಿತರಿಸುವ ‘ಇಂದಿರಾ ಕಿಟ್’ ಕಾರ್ಯಕ್ರಮಕ್ಕೆ ಆರಂಭದಲ್ಲೇ ಹಲವು ಸವಾಲು ಎದುರಾಗಿದೆ.
ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ, 2023ರ ಜು.10ರಿಂದ ಜಾರಿಗೆ ತಂದಿತ್ತು. 2023ರ ಜು.10ರಿಂದ 2025ರ ಜನವರಿವರೆಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖೇನ ಹಣ ಹಾಕಲಾಗುತ್ತಿತ್ತು. ಕಡಿಮೆ ದರಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರವು ಒಪ್ಪಿದ್ದ ಕಾರಣ 2025ರ ಫೆಬ್ರವರಿಯಿಂದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ನ ಪ್ರತಿ ಸದಸ್ಯನಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಕಾರ್ಡ್‌ದಾರರಿಗೆ ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ಹೊಂದಿರುವ ಕಿಟ್ ವಿತರಿಸುವ ಸಲುವಾಗಿ ಆಹಾರ ಇಲಾಖೆ, ಕಳೆದ 6 ತಿಂಗಳಿಂದ ಯೋಜನೆ ಅನುಷ್ಠಾನಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದೆ.ಈ ಕುರಿತು ಸಚಿವ ಕೆ.ಎಚ್.ಮುನಿಯಪ್ಪ ಅಗಾಗ್ಗೆ ಹೇಳಿಕೆ ನೀಡುತ್ತಿದ್ದರೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಕಿಟ್ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರ ಅಥವಾ ಇಲಾಖೆಯಿಂದ ಇದುವರೆಗೆ ನಮಗೆ ಸೂಚನೆ ಬಂದಿಲ್ಲ. ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಕಿಟ್ ಕುರಿತು ಕಾರ್ಡ್‌ದಾರರು ವಿಚಾರಿಸುತ್ತಿದ್ದಾರೆ. ಯಾವಾಗಿನಿಂದ ಕಿಟ್ ವಿತರಣೆಯಾಗಲಿದೆ ಎಂಬುದರ ಬಗ್ಗೆ ನಮ್ಮನ್ನು ಕೇಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ. ಮಾರ್ಚ್ ಅಥವಾ ಏಪ್ರಿಲ್ ಬಳಿಕ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಣ್ಣ ಆಧಾರದಲ್ಲಿ ಕಿಟ್ ವಿತರಣೆ:
ಇಂದಿರಾ ಕಿಟ್ ವಿತರಣೆಗಾಗಿ ಇಲಾಖೆ, ರಾಜ್ಯದ 31 ಜಿಲ್ಲೆಗಳನ್ನು ಐದು ವಿಭಾಗವಾಗಿ ವಿಗಂಡಿಸಿದೆ. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಗದಗ, ಹಾವೇರಿ ಮತ್ತು ಧಾರವಾಡಕ್ಕೆ (ವಿಭಾಗ-1) ನೇರಳೆ ಬಣ್ಣದ ಬ್ಯಾಗ್ ವಿತರಿಸಲಾಗುತ್ತದೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿಗೆ ನೀಲಿ ಬಣ್ಣದ ಕಿಟ್ ಸರಬರಾಜು ಮಾಡಲಾಗುತ್ತದೆ. ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಕಾರ್ಡ್‌ದಾರರಿಗೆ( ವಿಭಾಗ-3) ಬಿಳಿ ಬಣ್ಣದ ಬ್ಯಾಗ್ ಕೊಡಲಾಗುತ್ತದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡಕ್ಕೆ ಹಳದಿ ಬಣ್ಣದ ಬ್ಯಾಗ್ ಹಾಗೂ ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿಗೆ ತಿಳಿ ನೀಲಿ ಬಣ್ಣದ ಇಂದಿರಾ ಕಿಟ್ ವಿತರಸಲಾಗುತ್ತದೆ.
ಅಹಾರ ಇಲಾಖೆಗೆ ಸವಾಲುಗಳೇನು?
* ಸದಸ್ಯವಾರು ಆಹಾರಧಾನ್ಯ ಪ್ಯಾಕಿಂಗ್ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಿದೆ
* ಖರೀದಿಸಿದ ಪದಾರ್ಥವನ್ನು ಪ್ರತ್ಯೇಕವಾಗಿ ಪ್ಯಾಕಿಂಗ್ ಮಾಡುವುದಕ್ಕೆ ದೊಡ್ಡ ಗೋದಾಮು ಅಗತ್ಯ
* ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಅಯೋಡಿನ್ ಉಪ್ಪು ಖರೀದಿಗಾಗಿ ಪ್ರತ್ಯೇಕವಾಗಿ ಕರೆದಿರುವ ಟೆಂಡರ್ ಪ್ರಕ್ರಿಯೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ ) ಕಾಯ್ದೆ ಅನ್ವಯ ನಿರ್ದಿಷ್ಟ ಸಮಯದಲ್ಲೇ ಮುಗಿಸುವಿಕೆ
* ಅರ್ಹತೆ ಹೊಂದಿರುವ ಕಂಪನಿಗೆ ಪದಾರ್ಥ ಪೂರೈಸಲು ಕಾರ್ಯಾದೇಶ ಪತ್ರ ನೀಡುವಿಕೆ
* ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆಯದಂತೆ ನಿಗಾ ವಹಿಸುವುದು
* ದುರ್ಬಳಕೆ ತಡೆಗೆ ಕಿಟ್ ಮೇಲೆ ಕ್ಯೂ ಆರ್ ಕೋಡ್ ಅಳವಡಿಕೆ
* ಗೋಡೌನ್‌ನಿಂದ ನ್ಯಾಯಬೆಲೆ ಅಂಗಡಿಗಳಿಗೆ ಕಿಟ್ ಸರಬರಾಜುಗೆ ಖಾಸಗಿ ಏಜೆನ್ಸಿಗೆ ಹೊಣೆ ವಹಿಸುವುದು
* ಯೋಜನೆ ಜಾರಿಯಾದ ಬಳಿಕ ಕನಿಷ್ಠ 6 ತಿಂಗಳವರೆಗೆ ಯಾವುದೇ ಲೋಪವಾಗದಂತೆ ವಿಶೇಷ ಗಮನ ಕೊಡುವುದು
* ಪ್ರತಿ ತಿಂಗಳು 1.25 ಕೋಟಿ ಕಾರ್ಡ್‌ಗಳಿಗೆ 57,521 ಮೆಟ್ರಿಕ್ ಟನ್ ಆಹಾರ ಪದಾರ್ಥ ಪೂರೈಕೆ ಮಾಡುವುದು.