Mango and Jackfruit mela  
ರಾಜ್ಯ

ಲಾಲ್‌ಬಾಗ್‌ನಲ್ಲಿ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ವಿವಿಧ ಜಿಲ್ಲೆಗಳಿಂದ ಹಲವು ತಳಿಯ ಮಾವು ಮತ್ತು ಹಲಸು ಮಾರಾಟಕ್ಕೆ ಲಭ್ಯ
ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ‘ಮಾವು ಮತ್ತು ಹಲಸು ಮೇಳ’ಕ್ಕೆ ಗುರುವಾರ ಚಾಲನೆ ದೊರೆತಿದ್ದು, ಜೂ. 30ರವರೆಗೆ ಮೇಳ ನಡೆಯಲಿದೆ.
ರಾಜ್ಯ ಮಾವು ಮತ್ತು ಹಲಸು ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿರುವ ಮೇಳದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಕೊಪ್ಪಳ, ಧಾರಾವಾಡ, ಬೆಂಗಳೂರು ಗ್ರಾಮಾಂತರ, ಹಾಸನ, ಬೆಂಗಳೂರು ದಕ್ಷಿಣ ಸೇರಿ ವಿವಿಧ ಜಿಲ್ಲೆಗಳಿಂದ 65 ಕ್ಕೂ ಹೆಚ್ಚು ತಳಿಯ ರಾಸಾಯನಿಕ ಮುಕ್ತ ಮಾವು ಆಗಮಿಸಿದ್ದು, ರೈತರಿಂದ ನೇರವಾಗಿ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿವೆ.
ವಿವಿಧ ತಳಿಯ ಹಣ್ಣುಗಳು:
ವಿಶೇಷವಾಗಿ ಬಾದಾಮಿ, ರಸಪುರಿ, ಮಲ್ಲಿಕಾ, ಸೆಂದೂರ, ಕೇಸರ್, ಶುಗರ್ ಬೇಬಿ, ಕಾಲಾಪಹಾಡ್, ರತ್ನಗಿರಿ ಆಲ್ಫಾನ್ಸೋ, ನೀಲಂ, ಆಮ್ರಪಾಲಿ, ಹಿಮಾಯತ್, ತೋತಾಪುರಿ, ಮಲಗೋವಾ, ದಶೇರಿ ಸೇರಿ ವಿವಿಧ ತಳಿಯ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇನ್ನು ಹಲಸಿನ ತಳಿಗಳಲ್ಲಿ ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತೂಬಗೆರೆ, ಲಾಲಾಬಾಗ್ ಮಧುರ, ಸೂರ್ಯ ಮತ್ತು ಚಂದ್ರ ಮೊದಲಾದ ತಿಳಿಯ ಹಣ್ಣುಗಳು ಮಾರಾಟಕ್ಕೆ ಲಭ್ಯವಿದೆ.
168 ಮಾವು ಹಾಗೂ 17 ಹಲಸು ಸೇರಿ 180ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದ್ದು, ರೈತರಿಗೆ ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಮಾವು ಮತ್ತು ಹಲಸಿನ ಹಣ್ಣುಗಳ ಜತೆಗೆ ಅವುಗಳಿಂದ ತಯಾರಿಸಿದ ಉತ್ಪನ್ನಗಳಾದ ಪಾನೀಯ, ಜಾಮ್, ಉಪ್ಪಿನಕಾಯಿ, ಚಿಪ್ಸ್, ಕ್ಯಾಂಡಿ, ಐಸ್‌ಕ್ರೀಮ್‌ಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ.
ಮೇಳದಲ್ಲಿ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್, ವ್ಯವಸ್ಥಾಪಕ ನಿರ್ದೇಶಕ ಟಿ.ಆರ್.ವೇದಮೂರ್ತಿ, ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಜಗದೀಶ್, ಸಹಾಯಕ ನಿರ್ದೇಶಕರಾದ ಬಾಲಕೃಷ್ಣ, ಚಂದ್ರಕಲಾ ಮತ್ತಿತರರಿದ್ದರು.
ಹಣ್ಣುಗಳ ದರ (ಪ್ರತಿ ಕೆ.ಜಿಗೆ)
ಸಕ್ಕರೆಗುತ್ತಿ -200 ರೂ.
ಹಿಮಾಮ್ ಪಸಂದ್ -200 ರೂ.
ತೋತಾಪುರಿ- 150 ರೂ.
ದಶೇರಿ - 100 ರೂ.
ಮಲ್ಲಿಕಾ -100 ರೂ.
ಬಾದಾಮಿ -90 ರೂ.
ರಸಪುರಿ -70 ರೂ.
ಹಲಸಿನ ಹಣ್ಣು - 40 ರೂ.

ರೈತರ ಮೂಲಕ ಗ್ರಾಹಕರಿಗೆ ನೇರ ಮಾರಾಟ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾವು-ಹಲಸು ಮೇಳ ಆಯೋಜಿಸಲಾಗಿದೆ. ಒಂದೇ ಸ್ಥಳದಲ್ಲಿ ವಿವಿಧ ಬಗೆಯ ರಾಸಾಯನಿಕ ಮುಕ್ತ ಹಣ್ಣುಗಳು ದೊರೆಯಲಿದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಂದ ನೇರವಾಗಿ ಕಡಿಮೆ ದರದಲ್ಲಿ ಮಾರಾಟವಾಗುತ್ತಿವೆ. ಹಾಗಾಗಿ ಹೆಚ್ಚು ಪ್ರಮಾಣದಲ್ಲಿ ಹಣ್ಣುಗಳ ಕೊಂಡುಕೊಳ್ಳುವ ಮೂಲಕ ರೈತರನ್ನು ಉತ್ತೇಜಿಸಬೇಕಿದೆ.