ದೊಡ್ಡಬಳ್ಳಾಪುರದ ಲಯನ್ಸ್ ಚಾರಿಟೀಸ್ ಟ್ರಸ್ಟ್ ಭವನದಲ್ಲಿ ಎಸ್ಕಾನ್ ಜೆನ್ಸೆಟ್ಸ್ ನೂತನ ವಾಹನ ಹಸ್ತಾಂತರ ಮಾಡಲಾಯಿತು. ಎಸ್ಕಾನ್ ಎಂಡಿ ಪ್ರಶಾಂತ್ ಕುಮಾರ್ ದಂಡಾನಿಯಾ, ನಿರ್ದೇಶಕರಾದ ದೀಪ್ ದಂಡಾನಿಯಾ, ಜಿಎಸ್ಟಿ ಆಯುಕ್ತ ಡಾ.ಎಂ.ಕೊಟ್ರಾಸ್ವಾಮಿ, ಜಿಎಸ್ಟಿ ಜಂಟಿ ಆಯುಕ್ತ ಚಿಂತನ್ ಕೆ.ಪಟೇಲ್, ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ ಇತರರಿದ್ದರು.
ದೊಡ್ಡಬಳ್ಳಾಪುರ : ಮಾನಸಿಕ ಅಸ್ವಸ್ಥತೆಯಿಂದ ಚೇತರಿಕೆಗೊಂಡ ರೋಗಿಗಳ ಪುನರ್ವಸತಿಗೆ ಮಾನಸಧಾರ ಯೋಜನೆ ಉಪಯುಕ್ತವಾಗಿದೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಹೇಳಿದರು.
ನಗರದ ಲಯನ್ಸ್ ಚಾರಿಟೀಸ್ ಟ್ರಸ್ಟ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಕಾನ್ ಜೆನ್ಸೆಟ್ಸ್ ಸಂಸ್ಥೆಯ ಸಿಎಸ್ಆರ್ ನಿಧಿಯಡಿ ನೂತನ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಕಾರ್ಯಕ್ರಮದಿಂದ ಗ್ರಾಮೀಣ ಭಾಗದವರಿಗೆ ಅನುಕೂಲವಾಗಲಿದೆ. ಮಾನಸಿಕ ಖಿನ್ನತೆಗಳಿಂದ ಚೇತರಿಕೆ ಕಂಡ ರೋಗಿಗಳ ಚಿಕಿತ್ಸೆ, ಕೌನ್ಸಿಲಿಂಗ್ ಹಾಗೂ ವೃತ್ತಿಪರ ಕೌಶಲ ತರಬೇತಿ ನೀಡಿ ರೋಗಿಗಳು ಸಮಾಜದಲ್ಲಿ ಮತ್ತೆ ಬೆರೆಯಲು ಸಹಕರಿಸುತ್ತದೆ. ಹಾಗೆಯೇ, ವೈದ್ಯಕಿಯ ಮೇಲ್ವಿಚಾರಣೆ, ತಜ್ಞರ ಸಮಾಲೋಚನೆ, ಯೋಗ, ಧ್ಯಾನ, ಕರಕುಶಲ ಕಲೆಗಳು ಮತ್ತು ಉದ್ಯೋಗ ತರಬೇತಿ ಸೇವೆ ಒದಗಿಸಲಾಗುತ್ತದೆ ಎಂದರು.
ಮನೋರೋಗ ತಜ್ಞ ಡಾ.ಗಿರೀಶ್ ಮಾತನಾಡಿ, ಈಗಾಗಲೇ ರಾಜ್ಯದ 12 ಜಿಲ್ಲೆಗಳಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರಾರಂಭಿಸುವ ಗುರಿ ಇದೆ. ಗ್ರಾಮಾಂತರ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಈ ಸೇವೆ ಆರಂಭಗೊಂಡಿದೆ. ಒಂದು ತಾಲೂಕಿಗೆ ಒಂದು ವಾಹನದಂತೆ ನಾಲ್ಕು ತಾಲೂಕುಗಳಿಗೂ ನಾಲ್ಕು ವಾಹನ ಪ್ರಾರಂಭವಾಗಲಿವೆ. 3 ತಿಂಗಳಿಗೊಮ್ಮೆ ತಂಡ ರಚಿಸಿ 20 ಮಹಿಳೆಯರು, 20 ಪುರುಷರಂತೆ ಒಟ್ಟು 40 ಜನರಿಗೆ ವೃತ್ತಿಪರ ತರಬೇತಿ ನೀಡಲಾಗುತ್ತದೆ. ಮಾನಸಿಕ ರೋಗಿಗಳ ಜೀವನದ ಗುಣಮಟ್ಟ ಸುಧಾರಣೆ ಸೇರಿ ಅವರ ಸಮಸ್ಯೆ ಗುರುತಿಸಿ ಕುಟುಂಬದ ಆರೈಕೆಗೆ ಬೆಂಬಲ ನೀಡುವುದೇ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.