ಒಂದು ಪೀಸ್ ಚಿಕನ್ ಹೆಚ್ಚಿಗೆ ತಿಂದ ಅನ್ನೋ ಒಂದೇ ಒಂದು ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದ ಪಾಪಿ
- ಮೋಜು-ಮಸ್ತಿ ಮಾಡಲು ಸಹೋದ್ಯೋಗಿಗಳೊಂದಿಗೆ ಸೇರಿ ಕಂಠಪೂರ್ತಿ ಕುಡಿದಿದ್ದ ವ್ಯಕ್ತಿ
- ಒಂದು ಪೀಸ್ ಚಿಕನ್ ಹೆಚ್ಚಿಗೆ ತಿಂದ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದ ಪಾಪಿ
- ಚಾಕುವಿನಿಂದ ತಾನೇ ಇರಿದು ಬಳಿಕ ಆಸ್ಪತ್ರೆಗೆ ಸೇರಿಸಿದರೂ ಉಳಿಯಲಿಲ್ಲ ಜೀವ
ಬೆಳಗಾವಿ: ನಿನ್ನೆ (ಆ.30) ಭಾನುವಾರ ಆದ ಕಾರಣ, ಮೋಜು-ಮಸ್ತಿ ಮಾಡಲು ಸಹೋದ್ಯೋಗಿಗಳೊಂದಿಗೆ ಸೇರಿ ಕಂಠಪೂರ್ತಿ ಕುಡಿದಿದ್ದ ವ್ಯಕ್ತಿ, ಸ್ನೇಹಿತನೊಬ್ಬ ಒಂದೇ ಒಂದು ಪೀಸ್ ಚಿಕನ್ ಹೆಚ್ಚಾಗಿ ತಿಂದ ಎಂಬ ಸಣ್ಣ ಕಾರಣಕ್ಕೆ ಬರ್ಬರವಾಗಿ ಕೊಲೆಗೈದ (Chicken Party) ಘಟನೆ ಬೆಳಗಾವಿ ಜಿಲ್ಲೆಯಲ್ಲಿ ವರದಿಯಾಗಿದೆ.
ಇಬ್ಬರೂ ಮೂಲತಃ ಉತ್ತರ ಪ್ರದೇಶವರಾಗಿದ್ದು, ಬೆಳಗಾವಿಯ ಒಂದೇ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಜೆಯಿದ್ದ ಕಾರಣ ಕಾರ್ಮಿಕರೆಲ್ಲರೂ ಸೇರಿ ಎಣ್ಣೆ ಪಾರ್ಟಿಗೆ ಸೇರಿದ್ದರು. ಈ ವೇಳೆ, ಕೋಳಿ ಮಾಂಸದ ಅಡುಗೆ ಮಾಡಿ, ಕಂಠಪೂರ್ತಿ ಕುಡಿದಿದ್ದರು. ಇನ್ನೇನು ಊಟಕ್ಕೆ ಕೂರಬೇಕು ಎನ್ನುವಾಗ, ನೀನು ನನಗಿಂತ ಹೆಚ್ಚು ಚಿಕನ್ ತುಂಡು ತಿಂದಿದ್ದೀಯಾ ಎಂದು ಸೀತಾರಾಮ್ ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.
ಕಂಠಪೂರ್ತಿ ಕುಡಿದು ಅಮಲಿನಲ್ಲಿದ್ದ ಅರುಣ್, ಒಂದು ಪೀಸ್ ಚಿಕನ್ ತಿಂದಿದ್ದಲ್ಲದೇ, ತನಗೆ ಎದುರು ಉತ್ತರ ಕೊಟ್ಟ ಎಂಬ ಕಾರಣಕ್ಕೆ ಕುಪಿತಗೊಂಡು, ಅಲ್ಲೇ ಇದ್ದ ಚಾಕುವಿನಿಂದ ಸೀತಾರಾಮ್‌ನ ಎದೆಗೆ ಇರಿದಿದ್ದಾನೆ. ಬಳಿಕ ತಕ್ಷಣವೇ ರಕ್ತಸ್ರಾವದಿಂದ ಪರದಾಡುತ್ತಿದ್ದ ಸೀತಾರಾಮ್‌ನನ್ನು ಆರೋಪಿ ಅರುಣ್ ಆಸ್ಪತ್ರೆಗೆ ಕರೆದೊಯ್ದು, ಈತ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ ಎಂದು ಸುಳ್ಳು ಕಥೆ ಕಟ್ಟಿದ್ದ. ಘಟನೆ ಬಗ್ಗೆ ಮಾಹಿತಿ ಪೊಲೀಸರು, ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಅತ್ತ ಚಿಕಿತ್ಸೆ ಫಲಕಾರಿಯಾಗದೆ ಸೀತಾರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆರೋಪಿ ಅರುಣ್‌ನನ್ನು ಸದ್ಯ ಬಂಧಿಸಿರುವ ಪೊಲೀಸರು, ತನಿಖೆಯನ್ನು ಕೈಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬೆಳಗಾವಿ ಎಸ್‌ಪಿ ಕೆ. ರಾಮರಾಜನ್, "ಆರಂಭದಲ್ಲಿ ಈ ಘಟನೆಯನ್ನು ಮುಚ್ಚಿಡಲು ಯತ್ನಿಸಲಾಗಿತ್ತು. ಆದರೆ, ಸಮಗ್ರ ತನಿಖೆ ನಡೆಸಿದಾಗ ಇದೊಂದು ಕೊಲೆ ಕೇಸ್ ಎಂಬುದು ನಮಗೆ ಸ್ಪಷ್ಟವಾಯಿತು. ಆರೋಪಿಯನ್ನು ಈಗ ಅರೆಸ್ಟ್ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).