ಮಹಿಳೆಯೊಬ್ಬರಿಗೆ ವಿಡಿಯೋ ಕರೆ ಮಾಡಿ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡಿದ್ದ ಯುವಕನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತ್ಯಾಗರಾಜನಗರ ನಿವಾಸಿ 34 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ತಮಿಳುನಾಡು ಮೂಲದ ಯುವಕನನ್ನು ಬಂಧಿಸಲಾಗಿದೆ. ಈ ಸಂಬಂಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತ್ಯಾಗರಾಜನಗರದಲ್ಲಿ ಕುಟುಂಬ ಸಮೇತ ವಾಸವಾಗಿರುವ ಸಂತ್ರಸ್ತೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಈ ಮಧ್ಯೆ ಜುಲೈ 29ರಂದು ಆರೋಪಿ ಸಂತ್ರಸ್ತೆಗೆ ಸಂದೇಶ ಕಳುಹಿಸಿದ್ದಾನೆ. ಮರು ದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಏಕಾಏಕಿ ವಿಡಿಯೋ ಕರೆ ಮಾಡಿ ತನ್ನ ಖಾಸಗಿ ಅಂಗವನ್ನು ತೋರಿಸಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಅದರಿಂದ ಗಾಬರಿಗೊಂಡ ಮಹಿಳೆ ಕೂಡಲೇ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿ ಆರೋಪಿಗೆ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಆರೋಪಿ ಡಿಪ್ಲೋಮಾ ವ್ಯಾಸಂಗ ಮಾಡಿದ್ದು, ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಸಾಮಾಜಿಕ ಜಾಲತಾಣ ಫೇಸ್‌ಬುಕ್ ನೋಡುವಾಗ ಸಂತ್ರಸ್ತೆಯ ಫೋಟೋ ಗಮನಿಸಿದ್ದಾನೆ. ನಂತರ ಅದರಲ್ಲಿದ್ದ ಆಕೆಯ ನಂಬರ್ ಪಡೆದು ಸಂದೇಶ ಕಳುಹಿಸಿದ್ದಾನೆ. ಆ ಬಳಿಕ ಮರು ದಿನ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.