ಯಡೂರು ಗ್ರಾಮದ ಉಮೇಶ್ ಅವರ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಗಂಡಾನೆಯನ್ನು ಸೆರೆ ಹಿಡಿದಿರುವುದು.
- ಅಮ್ಮತ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶ
- ಸಾರ್ವಜನಿಕರು ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ
ಸಿದ್ದಾಪುರ:
ಅಮ್ಮತ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರು ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಗಳನ್ನು ಸೆರೆ ಹಿಡಿಯುವ ಎರಡನೇ ಹಂತದ ಮೊದಲ ದಿನದ ಕಾರ್ಯಾಚರಣೆಯಲ್ಲಿ ಯಡೂರು ಗ್ರಾಮದ ಉಮೇಶ್ ಅವರ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಸುಮಾರು 30 ವರ್ಷದ ಗಂಡಾನೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿ ಡಾ.ಆದರ್ಶ ನೇತೃತ್ವದ ಪರಿಣತ ತಂಡವು ಕಾರ್ಯಾಚರಣೆ ನಡೆಸಿ, ಗಂಡಾನೆಗೆ ಅರಿವಳಿಕೆ ನೀಡಿ ನಿಯಂತ್ರಣಕ್ಕೆ ತೆಗೆದುಕೊಂಡಿತು. ಬಳಿಕ ದುಬಾರೆ ಆನೆ ಶಿಬಿರದ ಐದು ಕುಮ್ಕಿ ಆನೆಗಳ ನೆರವಿನಿಂದ ಗಂಡಾನೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಯಿತು.
ವಿರಾಜಪೇಟೆ ಡಿಎಫ್‌ಒ ವಿನೀತಾ ಜಿ. ಚೌಹಾಣ್, ಎಸಿಎಫ್ ತಹಸೀನ್ ಬಾನು, ಮಡಿಕೇರಿ ಡಿಎಫ್‌ಒ ಅಭಿಷೇಕ್ ಹಾಗೂ ವಲಯ ಅರಣ್ಯಾಧಿಕಾರಿ ಶಿವರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಶುವೈದ್ಯರಾದ ಮುಜೀಬ್ ಮತ್ತು ಶೂಟರ್ ಆದರ್ಶ್ ಹಾಗೂ ದುಬಾರೆ ಶಿಬಿರದಿಂದ ಆಗಮಿಸಿದ್ದ ಮಾವುತರು ಪಾಲ್ಗೊಂಡಿದ್ದರು.ಜತೆಗೆ ಆನೆ ಕಾರ್ಯಪಡೆ, ಆರ್‌ಆರ್‌ಟಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅಮ್ಮತ್ತಿ ಶಾಖೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಮೂರು ಗಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಸರ್ಕಾರ ಅರಣ್ಯ ಇಲಾಖೆಗೆ ಆದೇಶಿಸಿತ್ತು. ಈ ಪೈಕಿ ಈಗಾಗಲೇ ಚಂಬೆಬೆಳ್ಳೂರಿನಲ್ಲಿ ಸುಮಾರು 32 ವರ್ಷದ ಒಂದು ಗಂಡಾನೆಯನ್ನು ಸೆರೆಹಿಡಿಯಲಾಗಿತ್ತು. ಈಗ ಮತ್ತೊಂದು ಗಂಡಾನೆ ಸೆರೆ ಸಿಕ್ಕಿದೆ, ಮೂರನೇ ಆನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿಯಲಿದೆ. ಸೆರೆಹಿಡಿಯಲಾದ ಆನೆಯನ್ನು ಸುರಕ್ಷಿತವಾಗಿ ದುಬಾರೆ ಆನೆ ಶಿಬಿರಕ್ಕೆ ರವಾನಿಸಲು ಅರಣ್ಯ ಇಲಾಖೆ ಅಗತ್ಯ ವ್ಯವಸ್ಥೆ ಮಾಡಿದೆ.
ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೀತಾ ಜಿ.ಚೌಹಾಣ್ ಮಾತನಾಡಿ, ಮೂರನೇ ಆನೆಯನ್ನು ಸೆರೆಹಿಡಿಯಲು ಸೋಮವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ತಿಳಿಸಿದರು
ಸೆರೆಹಿಡಿಯಲಾದ ಆನೆಗಳನ್ನು ದುಬಾರೆ ಆನೆ ಶಿಬಿರದಲ್ಲಿ ಇರಿಸಲಾಗುವುದು. ಅಲ್ಲಿ ಮಾವುತರ ಮೂಲಕ ತರಬೇತಿ ಹಾಗೂ ಪಳಗಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಬೆಳೆ ಹಾನಿ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಉಪಟಳಕಾರಿ ಕಾಡಾನೆಗಳನ್ನು ಗುರುತಿಸಿ ಅವುಗಳ ಚಲನವಲನವನ್ನು ಟ್ರ್ಯಾಕಿಂಗ್ ಮಾಡುವ ಮೂಲಕ ಮುಂದಿನ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.