Leadership Crisis 
ರಾಜ್ಯ

Leadership Crisis: ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ!

ಕಲಬುರಗಿ: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ನಾಯಕತ್ವ(Leadership Crisis) ಬದಲಾವಣೆ ಹಾಗೂ ಗೊಂದಲದ ಮೋಡಗಳು ಶೀಘ್ರದಲ್ಲೇ ಬಗೆಹರಿಯಲಿವೆ ಎಂದು ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭರವಸೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಹೈಕಮಾಂಡ್ ಗಮನಹರಿಸಿದೆ. ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಪಕ್ಷವನ್ನು ಸುಸ್ಥಿತಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

ಸಿಎಂ ಸ್ಥಾನಕ್ಕೆ 'ಹಣೆಬರಹ' ಬೇಕು!

"ಖರ್ಗೆಯವರು ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಉತ್ತಮ" ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. "ನಾನು ಸಿಎಂ ಆಗಬೇಕೆಂದು ಪರಮೇಶ್ವರ್ ಹೇಳುತ್ತಾರೆ, ನೀವು ಹೇಳುತ್ತೀರಿ ಹಾಗೂ ದೆಹಲಿಯ ಹೈಕಮಾಂಡ್ ನಾಯಕರೂ ಹೇಳಬಹುದು. ಆದರೆ ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಹಣೆಬರಹ ಚೆನ್ನಾಗಿರಬೇಕಲ್ಲವೇ?" ಎಂದು ಮಾರ್ಮಿಕವಾಗಿ ನುಡಿದರು.
ಮುಂದುವರಿದು ಮಾತನಾಡಿದ ಅವರು, "ನನ್ನ ಪಾಲಿಗೆ ಹಣೆಬರಹಕ್ಕಿಂತ ಹೆಚ್ಚಾಗಿ ಪಕ್ಷದ ಸಿದ್ಧಾಂತ (Ideology) ಮತ್ತು ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ನಾನು ಸಲ್ಲಿಸಿದ ಸೇವೆ ಮುಖ್ಯವಾಗಿದೆ. ಅಂತಿಮವಾಗಿ ಸೋನಿಯಾ ಗಾಂಧಿಯವರು ನಮ್ಮ ಭವಿಷ್ಯ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ" ಎಂದರು.

ಸಧ್ಯಕ್ಕೆ ಸಿಎಂ ಬದಲಾವಣೆ ಇಲ್ಲ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬ ಪ್ರಶ್ನೆಯೇ ಸಧ್ಯಕ್ಕೆ ಉದ್ಭವಿಸುವುದಿಲ್ಲ. ಏಕೆಂದರೆ ಸದ್ಯಕ್ಕೆ ರಾಜ್ಯದಲ್ಲಿ ಸಕ್ರಿಯವಾಗಿರುವ ಮುಖ್ಯಮಂತ್ರಿಗಳು ಇದ್ದಾರೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ಅಥವಾ ಅನಿವಾರ್ಯತೆ ಎದುರಾದರೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನಾವು ಕುಳಿತು ಸಮಾಲೋಚನೆ ನಡೆಸುತ್ತೇವೆ ಎಂದು ತಿಳಿಸಿದರು.
"ಸಿಎಂ ಬದಲಾವಣೆ ವಿಚಾರ ಚರ್ಚಿಸಲು ಇನ್ನು ಸಾಕಷ್ಟು ಸಮಯವಿದೆ. ಆ ಸಂದರ್ಭ ಬಂದಾಗ ಅಂದಿನ ಪರಿಸ್ಥಿತಿಗೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು" ಎನ್ನುವ ಮೂಲಕ ಸದ್ಯದ ಚರ್ಚೆಗಳಿಗೆ ಖರ್ಗೆ ಅವರು ತಾತ್ಕಾಲಿಕ ವಿರಾಮ ಹಾಕಿದ್ದಾರೆ,(ಏಜೆನ್ಸೀಸ್​).