ಸವಟಗಿ ಗ್ರಾಮದ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಸಾಗಿಸುತ್ತಿರುವುದು.
ಯಾಸೀನ್ ಕಿತ್ತೂರು ಮಲ್ಲಮ್ಮನ ಬೆಳವಡಿ
ಮೂಲಸೌಲಭ್ಯಗಳಿಂದ ವಂಚಿತವಾದ ಸಮೀಪದ ಸವಟಗಿ ಗ್ರಾಮ ಸಮರ್ಪಕ ರಸ್ತೆ ಸಂಪರ್ಕವಿಲ್ಲದೆ ನಿತ್ಯ ಸಮಸ್ಯೆ ಎದುರಿಸುತ್ತಿದೆ.
ಪ್ರತಿದಿನ ಗ್ರಾಮದಿಂದ ಶಾಲಾ&ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ನಗರಗಳಿಗೆ ತೆರಳುತ್ತಾರೆ. ಆದರೆ, ಸಮರ್ಪಕ ಸಾರಿಗೆ ಹಾಗೂ ವ್ಯವಸ್ಥಿತ ರಸ್ತೆ ಇಲ್ಲದ ಪರಿಣಾಮ ಪರಿತಪಿಸುವಂತಾಗಿದೆ. ಸಾರಿಗೆ ಕೊರತೆ ಮಧ್ಯೆಯೂ ನಿಗದಿತ ಸಮಯಕ್ಕೆ ತಲುಪಬೇಕಾದರೆ ಹಾಳಾದ ರಸ್ತೆಯಿಂದ ಜನರ ಸ್ಥಿತಿ ಅಯೋಮಯವಾಗಿದೆ.
ತಗ್ಗು&ಗುಂಡಿಗಳ ರಸ್ತೆ: ರಸ್ತೆ ಮೊದಲೇ ತಗ್ಗು&ಗುಂಡಿಗಳಿಂದ ತುಂಬಿದ್ದು, ಕಬ್ಬು ಸಾಗಿಸುವ ಟ್ರ್ಯಾಕ್ಟರ್ ನಿರಂತರ ಓಡಾಟದಿಂದ ರಸ್ತೆ ಸ್ಥಿತಿ ಮತ್ತಷ್ಟು ದುಸ್ಥಿತಿಗೆ ತಲುಪಿದೆ. ಗ್ರಾಮದ ಜನರು ವೈದ್ಯಕಿಯ ಸೌಲಭ್ಯ ಪಡೆಯಲು 12 ಕಿಮೀ ದೂರದ ಉಡಿಕೇರಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಹೋಗಬೇಕಿದ್ದು, ಮಳೆಗಾಲದಲ್ಲಿ ಸಮಸ್ಯೆ ಹೇಳತೀರದು.
ದ್ವಿಚಕ್ರ ವಾಹನ ಸವಾರರಂತೂ ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ. ರಾತ್ರಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಆಡಳಿತ ವ್ಯವಸ್ಥೆ ರ್ನಿಲಕ್ಷ್ಯ: ರಸ್ತೆ ದುರಸ್ತಿಪಡಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕ ದುರಸ್ತಿ ಮಾಡುವ ಗೋಜಿಗೂ ಲೋಕೋಪಯೋಗ ಇಲಾಖೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸವಟಗಿ ರಸ್ತೆ ದುರಸ್ತಿ ಕುರಿತು ಚನ್ನಮ್ಮನ ಕಿತ್ತೂರು ಹಾಗೂ ಬೈಲಹೊಂಗಲ ಅಧಿಕಾರಿಗಳನ್ನು ಸಂಪರ್ಕಿಸಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಜಿಪಂ ವ್ಯಾಪ್ತಿಗೆ ಒಳಪಡುತ್ತದೆ ಎಂದು ತಿಳಿಸಿದ್ದಾರೆ.