ಬೆಂಗಳೂರು: 12ನೇ ಶತಮಾನದ ಭಕ್ತ ಭಂಡಾರಿ ಬಸವಣ್ಣನವರ ಬಗ್ಗೆ ಹಗುರವಾದ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದಕ್ಕೆ ವೀರಶೈವ ಪಂಚಪೀಠದ ಜಗದ್ಗುರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ಧರ್ಮದ ಅಥವಾ ಪರಂಪರೆಯ ಮಹಾತ್ಮರನ್ನು ಅವಹೇಳನ ಮಾಡುವ ಹೇಳಿಕೆಗಳು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತವೆ. ಇಂತಹ ಹೇಳಿಕೆಗಳನ್ನು ಯಾರೇ ನೀಡಿದರೂ ಖಂಡನೀಯ ಎಂದು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಬೇಸರ ಹೊರಹಾಕಿದೆ.
ಭಾರತ ದೇಶವು ಧಾರ್ಮಿಕ ಪರಂಪರೆಗಳಿಗೆ ವಿಶೇಷ ಗೌರವ ನೀಡುವ ಸಂಸ್ಕೃತಿಯನ್ನು ಹೊಂದಿದೆ. ಅನೇಕ ಧಾರ್ಮಿಕ ಸಂಸ್ಥೆಗಳು ಹಾಗೂ ಪರಂಪರೆಗಳ ಬೆಳವಣಿಗೆಯಲ್ಲಿ ಆಚಾರ್ಯರು, ಸಂತರು, ಮಹಾಂತರು ಮತ್ತು ಶರಣರು ಮಹತ್ವದ ಕೊಡುಗೆ ನೀಡಿದ್ದಾರೆ. ಹೀಗಾಗಿ, ಯಾವುದೇ ಧಾರ್ಮಿಕ ಸಂಸ್ಥೆ ಅಥವಾ ಪರಂಪರೆಯ ಮಹಾತ್ಮರನ್ನು ಅವಹೇಳನ ಮಾಡುವುದು ಸರಿಯಲ್ಲ ಎಂದು ತಿಳಿಸಿದೆ.
ಧಾರ್ಮಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ನಿಂದನೆ ಅಥವಾ ತೇಜೋವಧೆ ಮಾಡುವಂತಹ ಹೇಳಿಕೆಗಳನ್ನು ಯಾರೂ ನೀಡಬಾರದು. ವಿವಿಧ ಸಂಪ್ರದಾಯಗಳ ಜನರು ತಮ್ಮ ತಮ್ಮ ಆರಾಧ್ಯ ವ್ಯಕ್ತಿಗಳ ಬಗ್ಗೆ ಅಪಾರ ಭಕ್ತಿ ಮತ್ತು ಗೌರವ ಹೊಂದಿರುತ್ತಾರೆ. ಅಂತಹವರ ಭಾವನೆಗಳಿಗೆ ನೋವುಂಟುಮಾಡುವ ಅಥವಾ ಕೆರಳಿಸುವ ಹೇಳಿಕೆಗಳು ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡಬಹುದು. ಮಹಾತ್ಮರ ಕುರಿತು ಮಾತನಾಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಶ್ರೀ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠದ ಜಗದ್ಗುರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮನಬಂದಂತೆ ಬರೆಯುವುದು, ಟೀಕೆ ಮಾಡುವುದು ಮತ್ತು ಆಕ್ಷೇಪಾರ್ಹ ಟಿಪ್ಪಣಿಗಳನ್ನು ಪ್ರಕಟಿಸುವುದು ಹೆಚ್ಚಾಗಿದೆ. ಇದೇ ಹಿನ್ನೆಲೆಯಲ್ಲಿ 12ನೇ ಶತಮಾನದ ಭಕ್ತ ಭಂಡಾರಿ ಬಸವಣ್ಣನವರ ಕುರಿತು ಹಗುರವಾದ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ಸಂಬಂಧ ಸರ್ಕಾರ ಕಠಿಣ ಕ್ರಮ ಕೈಗೊಂಡಿರುವ ಬಗ್ಗೆಯೂ ವರದಿಯಾಗಿದೆ ಎಂದರು.
ಯಾವುದೇ ವ್ಯಕ್ತಿ ಯಾವುದೇ ಮಹಾತ್ಮರ ಬಗ್ಗೆ ಅಸಹನೀಯ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಅಥವಾ ಬರೆಯುವುದು ತಪ್ಪು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ವೀರಶೈವ ಪಂಚಪೀಠದ ಜಗದ್ಗುರುಗಳು ಒತ್ತಾಯಿಸಿದ್ದಾರೆ.