ಕಲಬುರಗಿಯಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರಿಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮಗುವೊಂದಕ್ಕೆ ಲಸಿಕೆ ಹಾಕುವ ಮೂಲಕ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಶಾಸಕಿ ಕನೀಜ್ ಫಾತಿಮಾ, ಜಿಪಂ ಸಿಇಒ ರಾಹುಲ್ ಸಂಕನೂರ, ಡಿಎಚ್ಒ ಡಾ.ಶರಣಬಸಪ್ಪ ಕ್ಯಾತನಾಳ, ಪ್ರಮುಖರಾದ ಡಾ.ಸಿದ್ದು ಪಾಟೀಲ್, ಡಾ.ಶಂಕ್ರಪ್ಪ ಮೈಲಾರಿ, ಡಾ.ಶರಣಬಸಪ್ಪ ಗಣಜಲಖೇಡ, ಡಾ.ಅನಿಲಕುಮಾರ ತಾಳಿಕೋಟಿ ಇತರರಿದ್ದರು.
- ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿಕೆ
- ರಾಷ್ಟ್ರಿಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
ಕಲಬುರಗಿ: ಐದು ವರ್ಷದೊಳಗಿನ ಮಗುವಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಆಳಂದ ಚೆಕ್ ಪೋಸ್ಟ್ ದುಬೈ ಕಾಲನಿ ಬಳಿಯ ಶಿವಾಜಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯಇಲಾಖೆ, ಜಿಲ್ಲಾ ಆರ್ಸಿಎಚ್ ಅಧಿಕಾರಿಗಳ ಕಚೇರಿಯಿಂದ ಭಾನುವಾರ ಆಯೋಜಿಸಿದ್ದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮೊದಲ ದಿನ ಬೂತ್ ಮಟ್ಟದ ಕಾರ್ಯಕ್ರಮ, ಉಳಿದ 3 ದಿನ ಮನೆ-ಮನೆಗಳಿಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಪಾಲಕರು ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶಾದ್ಯಂತ ಭಾನುವಾರದಿಂದ ಜು.1ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ 3,51,716 ಇದ್ದು, ಒಟ್ಟು 1519 ಲಸಿಕೆ ಕೇಂದ್ರ ಸ್ಥಾಪಿಸಲಾಗಿದೆ. 1453 ತಂಡ, 132 ಟ್ರಾನ್ಸಿಟ್, 31 ಸಂಚಾರಿ ತಂಡಗಳು ಸೇರಿ ಒಟ್ಟು 1682 ತಂಡಗಳು ಕಾರ್ಯನಿರ್ವಹಿಸಲಿವೆ. ಮೇಲ್ವಿಚಾರಕರು 333 ಇದ್ದು, 3364 ಜನ ಲಸಿಕೆ ಹಾಕುವವರಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಸಕಿ ಕನೀಜ್ ಫಾತಿಮಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರು.
ಜಿಪಂ ಸಿಇಒ ರಾಹುಲ್ ಸಂಕನೂರ, ಅಪರ ನಿರ್ದೇಶಕಿ ಡಾ.ಪುಷ್ಪಾ ಎಚ್.ಆರ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ, ಉಪ ನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ, ಪೋಲಿಯೋ ಸರ್ವೇಕ್ಷಣಾ ಅಧಿಕಾರಿ ಡಾ.ಅನಿಲಕುಮಾರ ತಾಳಿಕೋಟಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ರಾಕೇಶ ಕಾಂಬಳೆ, ಜಿಲ್ಲಾ ಕ್ಷಯರೋಗ ನಿಮೂರ್ಲನಾಧಿಕಾರಿ ಡಾ.ಚಂದ್ರಕಾಂತ ನರಿಬೋಳ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವಿವೇಕಾನಂದ ರಡ್ಡಿ, ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಡಾ.ರವಿಕಾಂತಿ ಎಸ್. ಕ್ಯಾತನಾಳ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ಭಾಲ್ಕೆ, ಶಿವಾಜಿನಗರ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಇಥೆಶಾಮ್, ಸಿಡಿಪಿಒ ಅಂಬಿಕಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ ಜಾವಳಗೇರಿ, ನಗರ ಆರೋಗ್ಯ ಕಾರ್ಯಕ್ರಮದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ, ಜಿಲ್ಲಾ ಟಿಸಿಸಿ ಸೈಕ್ಯಾಟ್ರಿಕ್ ಕೌನ್ಸಲರ್ ಮಂಜುನಾಥ ಕಂಬಾಳಿಮಠ ಇತರರಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಸಿದ್ದು ಪಾಟೀಲ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ್ ನಿರೂಪಣೆ ಮಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಬಳೆ ವಂದಿಸಿದರು.
"
ಮಕ್ಕಳಿಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಆರೋಗ್ಯ ಸಮಸ್ಯೆಯನ್ನು ಪೋಲಿಯೋ ಲಸಿಕೆ ಹಾಕಿಸುವ ಮೂಲಕ ತಡೆಗಟ್ಟಬಹುದು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗಳಿಗೆ ಲಸಿಕೆ ಹಾಕಲು ಬಂದಾಗ ತಾತ್ಸಾರ ತೋರಬಾರದು. ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು.
— > ಅಲ್ಲಮಪ್ರಭು ಪಾಟೀಲ್, ಶಾಸಕ