ಸಾಕು ಪ್ರಾಣಿಗಳಿಗೆ ತಪ್ಪದೇ ರೇಬಿಸ್ ಲಸಿಕೆ ಹಾಕಿಸಿ rabies 
ರಾಜ್ಯ

ಸಾಕು ಪ್ರಾಣಿಗಳಿಗೆ ತಪ್ಪದೇ ರೇಬಿಸ್ ಲಸಿಕೆ ಹಾಕಿಸಿ rabies

ಕುದೂರು: ರೇಬಿಸ್ ಎಂಬುದು ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಕೇಂದ್ರ ನರಮಂಡಲದ ಮೇಲೆ ದಾಳಿ ಮಾಡಿ ಮಿದುಳಿನ ತೀವ್ರ ಸೋಂಕಿಗೆ ಕಾರಣವಾಗುತ್ತದೆ ಎಂದು ಕುದೂರು ಸರ್ಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಸಿ ರಾಜೇಂದ್ರ ತಿಳಿಸಿದರು.rabies
ಹೋಬಳಿಯ ಚಿಕ್ಕಮಸ್ಕಲ್ ಹಾಗೂ ಮಲ್ಲಪ್ಪನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೇಬಿಸ್ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸುವುದು ಅತ್ಯಗತ್ಯ. ಸೋಂಕಿತ ಪ್ರಾಣಿಗಳ ಕಚ್ಚುವಿಕೆ ಅಥವಾ ಗೀಚುವಿಕೆಯಿಂದ ರೇಬಿಸ್ ಹರಡಲಿದ್ದು, ಸರಿಯಾದ ಮುನ್ನೆಚ್ಚರಿಕೆ ಮತ್ತು ಸಮಯೋಚಿತ ಚಿಕಿತ್ಸೆಯ ಮೂಲಕ ಇದನ್ನು ಶೇ.100 ತಡೆಗಟ್ಟಬಹುದು ಎಂದು ತಿಳಿಸಿದರು.
ರೇಬಿಸ್ ಸೋಂಕಿತ ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಸೋಪು ಮತ್ತು ಹರಿಯುವ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಗಾಯವನ್ನು ತೊಳೆದ ನಂತರ ಬೆಟಾಡಿನ್ ಅಥವಾ ಆಲ್ಕೋಹಾಲ್ ಆಧಾರಿತ ಆಂಟಿಸೆಪ್ಟಿಕ್ ದ್ರಾವಣವನ್ನು ಹಚ್ಚಿ, ಹತ್ತಿರದ ಆಸ್ಪತ್ರೆಗೆ ತೆರಳಿ ರೇಬಿಸ್ ಲಸಿಕೆಯನ್ನು (ಪಿಇಪಿ) ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ರೇಬಿಸ್ ಕಾಯಿಲೆಯ ಮುಖ್ಯಲಕ್ಷಣಗಳು, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಆಶಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಚಿಕ್ಕಮಸ್ಕಲ್, ಮಲ್ಲಪ್ಪನಹಳ್ಳಿಯ ಗ್ರಾಮಸ್ಥರು ಹಾಜರಿದ್ದರು.