ಬೆಂಗಳೂರು: ಜೀವನದ ಒಂದು ಭಾಗವಾಗಿ ಸೇವೆ ಅಳವಡಿಸಿಕೊಳ್ಳಬೇಕು. ನಾನಿಲ್ಲಿ ಬರೀ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಂದಿಲ್ಲ. ಒಬ್ಬ ಸೇವಕನಾಗಿ ಬಂದಿದ್ದೇನೆ ಎಂದು ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಯೂತ್ ಫಾರ್ ಸೇವಾ, ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಸ್ವಯಂಸೇವಕ ವರ್ಷ- 2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೂತ್ ಫಾರ್ ಸೇವಾ ನನ್ನನ್ನು ಒಂದು ಶಕ್ತಿಯುತ ಆಲೋಚನೆಯ ರಾಯಭಾರಿಯಾಗಲು ಕೇಳಿಕೊಂಡಿದೆ. ಅದಕ್ಕೆ ಒಪ್ಪಿಕೊಂಡಿದ್ದೇನೆ. ಫೌಂಡೇಶನ್ ಮೂಲಕ ನಾನು ಶಾಲೆಯನ್ನು ದತ್ತು ಪಡೆದಿದ್ದೇನೆ. ಸೇವೆಯ ಶಕ್ತಿಯಲ್ಲಿ ಅಪಾರ ನಂಬಿಕೆ ಹೊಂದಿದ್ದೇನೆ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸ್ಥಾಪಕ ಡಾ.ಆರ್. ಬಾಲಸುಬ್ರಮಣ್ಯಂ ಮಾತನಾಡಿ, ಸೇವೆಯು ಪರರಿಗಲ್ಲ, ಅದು ನಮ್ಮ ಅಂತರಾತ್ಮದ ತೃಪ್ತಿಗಾಗಿ. ಸಮಾಜಕ್ಕೆ ಸೇವೆ ಮಾಡುತ್ತಿದ್ದೇವೆ ಎಂಬ ಭ್ರಮೆ ಬೇಡ. ಸ್ವಯಂಸೇವೆಯಲ್ಲಿ ಶುದ್ಧತೆ, ತಾಳ್ಮೆ, ಸತತ ಪ್ರಯತ್ನ ಎಂಬ ಅಂಶ ಇರಬೇಕು. ಫಲಿತಾಂಶದ ನಿರೀಕ್ಷೆಯಿಲ್ಲದೆ ಕರ್ಮ ಮಾಡುವುದು,ಎದುರಾಗುವ ಯಾವುದೇ ಕೆಲಸವನ್ನಾದರೂ ಸ್ವೀಕರಿಸುವ ಸಿದ್ಧತೆಯಲ್ಲಿರುವುದು ಸೇವೆಯ ಬಗ್ಗೆ ಭಗವದ್ಗೀತೆಯಲ್ಲಿರುವ ಸಾರವಾಗಿದೆ ಎಂದರು.
ಇಂದಿನ ಪರಿಸರ,ಆರ್ಥಿಕ ಬಿಕ್ಕಟ್ಟುಗಳಿಗೆ ನಾವೇ ಕಾರಣ. ಜಗತ್ತಿನ ಶೇ.33 ಕಾರ್ಬನ್ ಮಾಲಿನ್ಯಕ್ಕೆ ಬಟ್ಟೆ ಉದ್ಯಮವೇ ಕಾರಣ. ನಾವೇ ಸೃಷ್ಟಿಸಿದ ಈ ಚಕ್ರವ್ಯೆಹದಲ್ಲಿ ಅಭಿಮನ್ಯುಗಳಾಗಿದ್ದೇವೆ. ಜಗತ್ತಿನ ಸಮಸ್ಯೆಗಳು ಒಂದೇ ದಿನದಲ್ಲಿ ಬದಲಾಗುವುದಿಲ್ಲ. ಇದಕ್ಕೆ ಅಪಾರ ತಾಳ್ಮೆ ಮತ್ತು ಸತತ ಪ್ರಯತ್ನ ಬೇಕು. ಸಮಾಜ ಸೇವೆಗೆ ಇಳಿಯುವವನಿಗೆ ಮೊದಲು ತನ್ನನ್ನು ತಾನು ಎದುರಿಸಿಕೊಳ್ಳುವ ಧೈರ್ಯವಿರಬೇಕು. ಪರಿಸರಕ್ಕಾಗಿ ತನ್ನ ಐಷಾರಾಮಿ ಜೀವನ ತ್ಯಜಿಸುವಂತಾಗಬೇಕು ಎಂದು ಹೇಳಿದರು.
ಅಭಿಯಾನದ ಅಂಗವಾಗಿ ಯುವಜನತೆಯಲ್ಲಿ ಸ್ವಯಂಸೇವೆ ಮನೋಭಾವ ಬಲಪಡಿಸುವ ನಿಟ್ಟಿನಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ, ರಾಷ್ಟ್ರಮಟ್ಟದಲ್ಲಿ ದಶಲಕ್ಷ ಗಂಟೆಗಳ ಸ್ವಯಂ ಸೇವೆಯ ಬೃಹತ್ ಗುರಿ ಹಾಕಿಕೊಂಡಿದೆ. ಇದನ್ನು ಕೇವಲ ಚಟುವಟಿಕೆಯಾಗಿರಿಸದೆ ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಅಭಿಯಾನದ ಉದ್ದೇಶವಾಗಿದೆ.