ರಾಜ್ಯ

ಪ್ರಿಯಾಂಕ್​ ಅವರನ್ನು ಡಿಸಿಎಂ ಮಾಡಿ

ಬಾಬುರಾವ ಯಡ್ರಾಮಿ
ಚಿತ್ತಾಪುರ: ಶಾಸಕ, ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಅವರಿಗೆ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಡಿ.ಕೆ. ಶಿವಕುಮಾರ್​ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕರ್ನಾಟಕ ಪ್ರದೇಶ ಕುರುಬ ಸಂದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ ಕಾಂಗ್ರೆಸ್​ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಸಮಾಜ ಕಲ್ಯಾಣ, ಪ್ರವಾಸೋದ್ಯಮ, ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಅನುಭವ ಹೊಂದಿರುವ ಖರ್ಗೆ ಅವರನ್ನು ಡಿಸಿಎಂ ಮಾಡಿದರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್​ಐ ನೇಮಕ ಪರೀಕ್ಷೆ ಮತ್ತು ಬಿಟ್​ ಕಾಯಿನ್​ ಸೇರಿ ಹಲವು ಹಗರಣಗಳನ್ನು ಬಯಲಿಗೆಳೆದ ರ್ಖಗೆ ಅವರ ಜನಪರ ಧ್ವನಿಯ ಪರಿಣಾಮ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಎಂಬುದಕ್ಕಿಂತಲೂ ಸ್ವಂತ ಪರಿಶ್ರಮ, ದಕ್ಷ ಆಡಳಿತ, ಅಭಿವೃದ್ಧಿ ಚಿಂತನೆ ಮೂಲಕ ರಾಜಕೀಯ ಪ್ರಭಾವ ಬೆಳೆಸಿಕೊಂಡಿರುವ ಇವರಿಗೆ ಡಿಸಿಎಂ ಸ್ಥಾನ ನೀಡಿದರೆ ಯುವ ಸಮುದಾಯ ಮತ್ತು ಪಕ್ಷದ ಸಂಟನೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜದ ಹಿರಿಯ ಮುಖಂಡ ಜುಮ್ಮಣ್ಣ ಪೂಜಾರಿ, ಯುವ ಮುಖಂಡ ಸಂತೋಷ ಪೂಜಾರಿ ಮಾತನಾಡಿದರು. ಯಲ್ಲಾಲಿಂಗ ಪೂಜಾರಿ ಮುಗುಟಾ, ಬಸವರಾಜ ಪೂಜಾರಿ ಮೊಗಲಾ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಜಗನ್ನಾಥ ಆಲೂರ, ಯಲ್ಲಾಲಿಂಗ ದಿಡ್ಡಿಮನಿ, ನಾಗೇಶ ಪೂಜಾರಿ, ಶಿವಶರಣಪ್ಪ ಪೂಜಾರಿ, ದೇವಿಂದ್ರಪ್ಪ ಅಲ್ಲೂರಕರ್​, ನಾಗು ಪೂಜಾರಿ ಇದ್ದರು