Make insurance mandatory for donkeys. 
ರಾಜ್ಯ

ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ

ತುಮಕೂರು ಡೆಸ್ಕ್
ತುರುವೇಕೆರೆ: ರೈತರು ತಮ್ಮಜಾನುವಾರುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಮನವಿ ಮಾಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಹಾರ ಚೆಕ್​ ವಿತರಣಾ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ 32 ರಾಸುಗಳು ಮೃತಪಟ್ಟಿದ್ದವು. ಅವುಗಳಿಗೆ ರೈತರು ವಿಮೆ ಮಾಡಿಸಿದ್ದರಿಂದ ಅವರೆಲ್ಲರಿಗೂ ಈಗ ಪರಿಹಾರ ರೂಪದಲ್ಲಿ ಸುಮಾರು 14.40 ಲಕ್ಷ ರೂ. ದೊರೆತಿದೆ. ಜಿಲ್ಲೆಯಲ್ಲಿ ಸುಮಾರು 2 ಲಕ್ಷ ರಾಸುಗಳಿಗೆ ವಿಮೆ ಸೌಲಭ್ಯ ಕಲ್ಪಿಸಲು ಜಿಲ್ಲಾ ಹಾಲು ಒಕ್ಕೂಟ ಸುಮಾರು 30 ಕೋಟಿ ರೂ. ಹಣ ವಿನಿಯೋಗಿಸಿದೆ. ರಾಸುಗಳಿಗೆ ಮಾಡಿಸುವ ವಿಮೆ ಸಂಪೂರ್ಣ ಉಚಿತವಾಗಿದ್ದು, ರೈತಾಪಿಗಳು ಉದಾಸೀನ ಮಾಡದೇ ತಮ್ಮ ರಾಸುಗಳಿಗೆ ವಿಮೆ ಮಾಡಿಸಬೇಕೆಂದು ಮನವಿ ಮಾಡಿದರು.
ಇತ್ತೀಚೆಗೆ ಕೆಲವು ಕಾರಣಗಳಿಂದಾಗಿ ರಾಸುಗಳು ಅಕಾಲಿಕವಾಗಿ ಮೃತಪಡುತ್ತಿವೆ. ಇಂತಹ ಸಂದರ್ಭದಲ್ಲಿ ರೈತರು ಆರ್ಥಿಕ ಸಂಕಷ್ಟಕ್ಕೆ ಈಡಾಗಬಾರದೆಂದು ರಾಸುಗಳು ನೀಡುವ ಹಾಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಗರಿಷ್ಠ 70 ಸಾವಿರದವರೆಗೆ ವಿಮೆ ಪರಿಹಾರ ನೀಡಲಾಗುತ್ತಿದೆ ಎಂದರು.