ಕಲಬುರಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ರಾಜಾ ಭೀಮಳ್ಳಿ, ಉದಯಕುಮಾರ ಚಿಂಚೋಳಿ, ಕೌಶಿಕ್ ಸುಂದರರಾಜು, ಡಾ.ಟಿ.ಎನ್.ಶ್ರೀನಿವಾಸ ಇತರರಿದ್ದರು.
- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸಲಹೆ
- ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ
ಕಲಬುರಗಿ: ದೇಶದಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿದ್ದು, ಉದ್ಯೋಗಾವಕಾಶಗಳಿದ್ದರೂ ಸೂಕ್ತ ಕೌಶಲ ಕೊರತೆಯಿಂದ ಯುವಜನರು ಹಿಂದುಳಿಯುತ್ತಿದ್ದಾರೆ. ಹೀಗಾಗಿ ಲಭ್ಯ ಅವಕಾಶಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಯಾಗಲು ಮುಂದಾಗಬೇಕು ಎಂದು ವೈದ್ಯಕಿಯ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಪಿಡಿಎ ಇಂಜಿನಿಯರಿಂಗ್ ಕಾಲೇಜು ಅವರಣದಲ್ಲಿ ಕೌಲಶಾಭಿವೃದ್ದಿ ಇಲಾಖೆ ಹಾಗೂ ಎಕ್ಸಲರೇಟರ್ ಸಂಸ್ಥೆ ಸಹಯೋಗದಡಿ ಬುಧವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಅವರು, ದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಅಷ್ಟೊಂದು ಸಮಸ್ಯೆಯಿಲ್ಲ. ಹಾಗಂತ ನಿರುದ್ಯೋಗ ಸಮಸ್ಯೆ ಇಲ್ಲವೆಂತಲ್ಲ. ಬದಲಾಗಿ ಉದ್ಯೋಗ ಪಡೆಯುವ ಕೌಶಲದ ಕೊರತೆ ಇದೆ. ಅದನ್ನು ನಮ್ಮ ಸರ್ಕಾರ ಸ್ಕಿಲ್ ಕನೆಕ್ಟ್ ಮೂಲಕ ಉದ್ಯೋಗಾಧಾರಿತ ಕೌಶಲ ನೀಡುತ್ತಿದೆ ಎಂದರು.
ಸಚಿವ ಪ್ರಿಯಾಂಕ್ ರ್ಖಗೆ ಸೇರಿ ಉದ್ಯಮಿಗಳು, ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಕೌಶಲ ಪರಿಷತ್ ರಚಿಸಿ ನಿರುದ್ಯೋಗ ಕುರಿತು ಚರ್ಚಿಸಿದಾಗ ಸ್ವಂತ ಊರಿನಲ್ಲಿ ಕೆಲಸ ಸಿಗಬೇಕು. ಹೆಚ್ಚಿನ ಸಂಬಳ ಬೇಡಿಕೆ, ಕಂಪನಿಗೆ ಅಗತ್ಯ ಕೌಶಲ ನಮ್ಮ ಯುವಕರಲ್ಲಿ ಇಲ್ಲದಿರುವುದು ಕಂಡುಬಂದಿದೆ. ಹೀಗಾಗಿ ಸರ್ಕಾರ ಯುವ ನಿಧಿ+ ಯೋಜನೆಯಡಿ ಅಗತ್ಯ ಕೌಶಲ ತರಬೇತಿ ನೀಡುತ್ತಿದೆ. ಸ್ವಂತ ಊರಿನಲ್ಲೇ ಉದ್ಯೋಗ ಬೇಕು ಎಂಬ ಮನಸ್ಥಿತಿಯಿಂದ ಹೊರಬಂದಾಗಲೇ ಉಜ್ವಲ ಭವಿಷ್ಯ ಕಂಡುಕೊಳ್ಳಬಹುದು ಎಂದು ಹೇಳಿದರು.
ಎರಡ್ಮೂರು ವರ್ಷದಲ್ಲಿ ರಾಜ್ಯಾದ್ಯಂತ ಹಲವೆಡೆ ಯುವಜನರಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಭೌತಿಕ ಉದ್ಯೋಗ ಮೇಳಗಳಿಗೆ ತಗಲುವ ವೆಚ್ಚ ಹಾಗೂ ಅಭ್ಯರ್ಥಿಗಳ ಪ್ರಯಾಣದ ಅಡಚಣೆ ತಪ್ಪಿಸಲು ಕೌಶಲ ಕನೆಕ್ಟ್ ಎಂಬ ಆನ್ಲೈನ್ ಪ್ಲಾಟ್ಫಾಮ್ರ್ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ನಿರುದ್ಯೋಗಿಗಳು ಆನ್ಲೈನ್ನಲ್ಲೇ ಸಂದರ್ಶನ ಹಾಗೂ ಉದ್ಯೋಗ ಹುಡುಕಾಟ ನಡೆಸಬಹುದು ಎಂದರು.
ಮೇಳದಲ್ಲಿ ಇನ್ಫೋಸಿಸ್, ಎಚ್ಸಿಎಲ್, ಎಕ್ಸ್ಚೇಂಜ್ ಟೆಕ್ನಾಲಜೀಸ್, ಮರ್ಸಿಡಿಸ್ ಬೆಂಜ್, ಸ್ಯಾಮ್ಸಂಗ್, ವಿಪ್ರೋ ಸೇರಿ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, 3,000ಕ್ಕೂ ಹೆಚ್ಚು ಉದ್ಯೋಗಾವಕಾಶ ನೀಡಲಿವೆ. ಡಿ.ಕೆ.ಶಿವಕುಮಾರ್ ಸರ್ಕಾರ ಮೊದಲ 100 ದಿನದ ಗುರಿಯಲ್ಲಿ ಯುವ ಉದ್ಯೋಗ ಸೇತುಗೆ ಆದ್ಯತೆ ನೀಡಿದೆ. ಶ್ರೀದಲ್ಲೇ ಸುಮಾರು 70,000 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಎಕ್ಸಿಲರೇಟರ್ ಸಂಸ್ಥೆ ಎಂಡಿ ಕೌಶಿಕ್ ಸುಂದರರಾಜು ಮಾತನಾಡಿ, ಒಂದೆಡೆ ಜನರಿಗೆ ಉದ್ಯೋಗವಿಲ್ಲ ಎಂದು ದೂರು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಕಂಪನಿಗಳು ತಮಗೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಹೇಳುತ್ತಿವೆ. ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾರ್ಗದರ್ಶನದಲ್ಲಿ ಆನ್ಲೈನ್ ಮೂಲಕವೇ ಜನರು ಎಲ್ಲ ಅವಕಾಶದ ಬಗ್ಗೆ ತಿಳಿದುಕೊಳ್ಳುವಂತಹ ವೇದಿಕೆ ರೂಪಿಸಲಾಗಿದೆ. ಇದು ಕೇವಲ ಆರಂಭ. ಆನ್ಲೈನ್ನಲ್ಲಿ 3,000ಕ್ಕೂ ಹೆಚ್ಚು ಜನರು ನೋಂದಾಯಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಎಕ್ಸಿಲರೇಟರ್ ಸಂಸ್ಥೆ ನಿರ್ದೇಶಕ (ಕಾರ್ಯಾಚರಣೆ) ಡಾ.ಟಿ.ಎನ್ .ಶ್ರೀನಿವಾಸ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಕಲಬುರಗಿಯಲ್ಲಿ ಇಂತಹ ಅದ್ಭುತ ಮೆಗಾ ಉದ್ಯೋಗ ಮೇಳ ಆಯೋಜಿಸಲು ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಜಿಪಂ ಸಿಇಒ ರಾಹುಲ್ ಸಂಕನೂರ, ಸಹಾಯಕ ಆಯುಕ್ತೆ ಸಾಹಿತ್ಯ ಅಲದಕಟ್ಟಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾಗುಬಾಯಿ ಸೂರ್ಯವಂಶಿ, ಎಚ್ಕೆಇ ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಇತರರಿದ್ದರು. ಶಿಕ್ಷಕಿ ಅರ್ಚನಾ ನಿರೂಪಣೆ ಮಾಡಿದರು. ಪಿಡಿಎ ಕಾಲೇಜಿನ ಪ್ರಾಂಶುಪಾಲ ಎಸ್.ಡಿ. ಪಾಟೀಲ್ ವಂದಿಸಿದರು.
ಆನ್ಲೈನ್ ಮೂಲಕ ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಗಿಟ್ಟಿಸಿಕೊಂಡ ಕಿರಣಕುಮಾರ, ದೀಪಕ ಸೇರಿ ಆಯ್ದ ಯುವಕರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಯೋಗದ ಆಫರ್ ಲೆಟರ್ ನೀಡಿ ಶುಭ ಕೋರಿದರು. ನಂತರ ಕಂಪನಿಗಳು ಸಂದರ್ಶನ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ನೇಮಕಾತಿ ಪ್ರಕ್ರಿಯೆ ವೀಸಿದರು.
ಜೆಸಿಬಿ ಇಂಡಿಯಾ ಲಿಮಿಟೆಡ್, ಮರ್ಸಿಡಿಸ್&ಬೆಂಜ್ ಇಂಡಿಯಾ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ವರ್ಲಪೂಲ್ ಆಫ್ ಇಂಡಿಯಾ, ಬ್ರಿಡ್ಜ್ ಸ್ಟೋನ್ ಇಂಡಿಯಾ, ಡಿಕ್ಸಾನ್ ಟೆಕ್ನಾಲಾಜೀಸ್, ಸ್ಯಾಮ್ಸಂಗ್, ಟಾಟಾ ಇಲೆಕ್ಟ್ರಾನಿಕ್, ಎಚ್ಡಿಎಫ್ಸಿ, ಫಾಕ್ಸಾನ್, ಎಚ್ಸಿಎಲ್ ಟೆಕ್ನಾಲಾಜೀಸ್ ಸೇರಿ ಅನೇಕ ಕಂಪನಿಗಳು ಭಾಗಿಯಾಗಿದ್ದವು.
"
ರಾಜ್ಯದಲ್ಲಿ 4 ಲಕ್ಷಕ್ಕೂ ಅಧಿಕ ಡಿಗ್ರಿ ಹಾಗೂ ಡಿಪ್ಲೊಮಾ ಪದವೀಧರರು ಯುವನಿಧಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಈ ಫಲಾನುಭವಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗಿಯಾಗಲು, ಕೌಶಲ ತರಬೇತಿ ಪಡೆಯಲು ಸೂಚಿಸಿದರೂ ಮುಂದೆ ಬಾರದಿರುವುದು ಅಚ್ಚರಿ ಮೂಡಿಸಿದೆ. ಉದ್ಯೋಗ ನೀಡಲು ಕಂಪನಿಗಳು ಮುಂದೆ ಬರುತ್ತಿದ್ದು, ಇಂಥ ಸದವಕಾಶದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು.
— > ಡಾ.ಶರಣಪ್ರಕಾಶ ಪಾಟೀಲ್ ವೈದ್ಯಕಿಯ ಶಿಕ್ಷಣ ಸಚಿವ