ಚಿಟಗುಪ್ಪ ತಾಲೂಕಿನ ವಳಖಿಂಡಿ ಗ್ರಾಮದಲ್ಲಿ ಶುಕ್ರವಾರ ಜಾಬ್ಕಾರ್ಡ್ ಮೇಳಕ್ಕೆ ತಾಪಂ ಇಒ ಲಿಂಗರಾಜ ಪಾಟೀಲ್ ಚಾಲನೆ ನೀಡಿ ಮಾತನಾಡಿದರು. ಸುದೇಶ ಕೊಡ್ಡೆ, ಅಶ್ವಿನಿ, ಸುಧಾಕರ ಪಾಟೀಲ್, ಮೌಲಾನಾ ಇತರರಿದ್ದರು.
- ಇಒ ಲಿಂಗರಾಜ ಪಾಟೀಲ್ ಕರೆ
- ವಳಖಿಂಡಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ
ಚಿಟಗುಪ್ಪ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬ ಕೂಲಿ ಕಾರ್ಮಿಕರು ಜಾಬ್ಕಾರ್ಡ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಿಂಗರಾಜ ಪಾಟೀಲ್ ಕರೆ ನೀಡಿದರು.
ತಾಲೂಕಿನ ಇಟಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಖಿಂಡಿ ಗ್ರಾಮದಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಜಾಬ್ಕಾರ್ಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾಬ್ಕಾರ್ಡ್ ಇಲ್ಲದ ಕುಟುಂಬಗಳು ವಿಬಿ&ಜಿ ರಾಮ್ ಜಿ ಯೋಜನೆಯಡಿ ಗ್ಯಾರಂಟಿ ಕಾರ್ಡ್ ಪಡೆದುಕೊಂಡು ಕೂಲಿ ಕೆಲಸಕ್ಕೆ ಹಾಜರಾಗಬೇಕು ಎಂದು ತಿಳಿಸಿದರು.
ವಿಬಿ&ಜಿ ರಾಮ್ ಜಿ ಯೋಜನೆಯ ಸಹಾಯಕ ನಿರ್ದೇಶಕ ಸುದೇಶ ಕೊಡ್ಡೆ ಮಾತನಾಡಿ, ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಅಂಡ್ ಆಜೀವಿಕಾ ಮಿಷನ್ ಗ್ರಾಮೀಣ ಯೋಜನೆಯಡಿ ಪ್ರತಿಯೊಂದು ಕುಟುಂಬಕ್ಕೆ ವರ್ಷಕ್ಕೆ 125 ಮಾನವ ದಿನಗಳ ಉದ್ಯೋಗ ಒದಗಿಸಲಾಗುತ್ತಿದೆ. ಪ್ರತಿ ಕೂಲಿ ಕಾರ್ಮಿಕರಿಗೆ 382 ರೂ. ಕೂಲಿ ನೀಡಲಾಗುತ್ತಿದ್ದು, ಅರ್ಹರು ಯೋಜನೆಯ ಲಾಭ ಪಡೆಯಬೇಕು ಎಂದರು.
ಯೋಜನೆಯಡಿ ದನದ ಕೊಟ್ಟಿಗೆ, ಕುರಿದೊಡ್ಡಿ, ಕೃಷಿ ಹೊಂಡ, ಬಚ್ಚಲು ಗುಂಡಿ, ಮಾವು, ವೀಳ್ಯದೆಲೆ, ಸಪೋಟ, ದಾಳಿಂಬೆ ಸೇರಿ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆಸಕ್ತ ಫಲಾನುಭವಿಗಳು ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಭಿವೃದ್ಧಿ ಅಧಿಕಾರಿ ಅಶ್ವಿನಿ, ತಾಂತ್ರಿಕ ಸಂಯೋಜಕ ಸುಧಾಕರ ಪಾಟೀಲ್, ಎಂಐಎಸ್ ಸಂಯೋಜಕ ಮೌಲಾನಾ, ಐಇಸಿ ಸಂಯೋಜಕ ವಿಶ್ವನಾಥ, ತಾಂತ್ರಿಕ ಸಹಾಯಕ ಮೈಬೂಬಸಾಬ್, ನಾಗಣ್ಣ, ಮನ್ಸೂರ್, ಸಂಜುಕುಮಾರ, ನಾಗೇಶ ಬಾವಗಿ ಇತರರಿದ್ದರು. ಜಾಬ್ಕಾರ್ಡ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಫಲಾನುಭವಿಗಳಿಂದ ಆಲಿಸಿ ಸ್ಥಳದಲ್ಲಿಯೇ ಪರಿಹರಿಸಲಾಯಿತು.