ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು.. ಎಚ್.ಎನ್.ಬಸವರಾಜು, ನೀಲಕಂಠಪ್ಪ, ಸುಭಾಷ್ ಇದ್ದರು.
ಗುಂಡ್ಲುಪೇಟೆ: ಗ್ರಾಮಾಂತರ ಪ್ರದೇಶಗಳ ಅಗತ್ಯವಿರುವ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜನರ ಬೇಡಿಕೆ ಮೇರೆಗೆ ಈಗಾಗಲೇ ಸಮುದಾಯ ಭವನಗಳನ್ನು ಕಟ್ಟಿಕೊಟ್ಟಿದ್ದರೂ ಸರಿಯಾಗಿ ನಿರ್ವಹಿಸದಿರುವುದು ಕಂಡುಬರುತ್ತಿದೆ. ಸರ್ಕಾರದ ನಿಯಮಾನುಸಾರ ತಾಲೂಕು ಕೇಂದ್ರದಲ್ಲಿ 1 ಕೋಟಿ ರೂ., ಹೋಬಳಿ ಮಟ್ಟದಲ್ಲಿ 50 ಲಕ್ಷ ರೂ., ಗ್ರಾಮಾಂತರ ಪ್ರದೇಶಗಳಲ್ಲಿ 20 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಸರ್ಕಾರದ ಅನುದಾನದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯಗಳ ಅಭಿವೃದ್ಧಿಗೆ ನಿರ್ಮಿಸಿದ ಭವನಗಳನ್ನು ಶುಭಕಾರ್ಯಗಳು ಹಾಗೂ ಸಮುದಾಯದ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮಾಜಿ ಸದಸ್ಯ ನೀಲಕಂಠಪ್ಪ, ಮುಖಂಡ ಅಂಬರೀಶ, ಮಹಿಳಾ ಸಂಘಟನೆಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.