ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಸಿಬಿಸಿ ರಕ್ತ ಪರೀಕ್ಷಾ ಉಪಕರಣ ಕೇಂದ್ರವನ್ನು ಶಾಸಕ ಎ. ಮಂಜು ಉದ್ಘಾಟಿಸಿದರು. ವಿದ್ಯಾರಾಜೇ ಅರಸ್ ಇತರರಿದ್ದರು.
ಅರಕಲಗೂಡು: ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಸಿಎಸ್‌ಆರ್ ಅನುದಾನದಡಿ ದೊಡ್ಡಮಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹೆತ್ತಗೌಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೂತನ ಸಿಬಿಸಿ ರಕ್ತ ಪರೀಕ್ಷಾ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದರು.
ತಾಲೂಕಿನ ದೊಡ್ಡಮಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಸಿಬಿಸಿ ರಕ್ತ ಪರೀಕ್ಷಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ಸಣ್ಣ-ಪುಟ್ಟ ಆರೋಗ್ಯ ತಪಾಸಣೆಗಾಗಿ ದೂರದ ಪಟ್ಟಣಗಳಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಇದೀಗ ಆಸ್ಪತ್ರೆಗಳಲ್ಲಿ ಅಳವಡಿಸಲಾಗಿರುವ ಸಿಬಿಸಿ ಯಂತ್ರಗಳ ಮೂಲಕ ರಕ್ತದ ವಿವಿಧ ಪರೀಕ್ಷೆಗಳನ್ನು ತ್ವರಿತವಾಗಿ ನಡೆಸಿ ವರದಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ರೋಗಗಳ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು.
ಸಿಎಸ್‌ಆರ್ ಅನುದಾನದ ಸದ್ಬಳಕೆಯಿಂದ ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಗ್ರಾಮೀಣ ಜನತೆಗೆ ತುರ್ತು ಆರೋಗ್ಯ ಸೇವೆಗಳನ್ನು ಸ್ಥಳೀಯ ಮಟ್ಟದಲ್ಲೇ ಲಭ್ಯವಾಗುವಂತೆ ಮಾಡಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಬದ್ಧರಾಗಿದ್ದು, ಸಾರ್ವಜನಿಕರು ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ದೊಡ್ಡಮಗ್ಗೆ ಹಾಗೂ ಹೆತ್ತಗೌಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೂತನ ಯಂತ್ರಗಳ ಅಳವಡಿಕೆಯಿಂದ ರಕ್ತಹೀನತೆ, ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಪತ್ತೆಗೆ ಅಗತ್ಯವಾದ ರಕ್ತ ಪರೀಕ್ಷೆಗಳನ್ನು ತ್ವರಿತವಾಗಿ ನಡೆಸಲು ಸಾಧ್ಯವಾಗಲಿದೆ. ಇದರಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಸಮಯ ಹಾಗೂ ವೆಚ್ಚ ಉಳಿತಾಯವಾಗಲಿದ್ದು, ಆರೋಗ್ಯ ಸೇವೆಗಳ ಗುಣಮಟ್ಟವೂ ಮತ್ತಷ್ಟು ಹೆಚ್ಚಳವಾಗಲಿದೆ ಎಂದರು.
ಶಾಹೀ ಸಂಸ್ಥೆ ಮುಖ್ಯಸ್ಥ ವಿದ್ಯಾರಾಜೇ ಅರಸ್, ಮುಖಂಡರಾದ ಮಂಜುನಾಥ್, ಗಂಗಾಧರ್, ಶಶಿಧರ್, ರಂಗನಾಥ್ ಇತರರಿದ್ದರು.