ಜಮಖಂಡಿ ನಗರದಲ್ಲಿ ಸುರಿಯುತ್ತಿದ್ದ ಮಳೆಯಲ್ಲೇ ಜಿಪಂ ಸಿಇಒ ಗಜಾನನ ಬಾಲೆ ಅವರು ಛತ್ರಿ ಹಿಡಿದುಕೊಂಡು ಹಾಸ್ಟೆಲ್‌ಗೆ ಭೇಟಿ ನೀಡಿದರು.
- ಸಿಇಒ ಗಜಾನನ ಬಾಲೆ ಮಿಂಚಿನ ಸಂಚಾರ
- ಅಧಿಕಾರಿಗಳಿಗೆ ಸೂಚನೆ
- ವಿವಿಧೆಡೆ ಪರಿಶೀಲನೆ
ಜಮಖಂಡಿ: ತಾಲೂಕಿನಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಸೋರಿಕೆಯಾಗದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಬಾಗಲಕೋಟೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ ಖಡಕ್ ಸೂಚನೆ ನೀಡಿದರು.
ತಾಲೂಕಿನಾದ್ಯಂತ ಶನಿವಾರ ಮಿಂಚಿನ ಸಂಚಾರ ನಡೆಸಿದ ಸಿಇಒ ಅವರು, ವಿವಿಧ ಗ್ರಾಮಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು. ತಾಲೂಕಿನ ಹುನ್ನೂರ ಗ್ರಾಮದ ಸಿದ್ಧ ಸರೋವರ, ಗ್ರಾಮ ಪಂಚಾಯಿತಿ ಕಾರ್ಯಾಲಯ, ಹಿಪ್ಪರಗಿ, ಕಡಪಟ್ಟಿ, ಕನ್ನೊಳಿ, ಗದ್ಯಾಳ, ಚಿಕ್ಕಲಕಿ ಕ್ರಾಸ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಪ್ರಯೋಗಾಲಯಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.
ಕಡಪಟ್ಟಿ ಗ್ರಾಮದ ಖಾಸಗಿ ಬಾವಿಗಳನ್ನು ವೀಕ್ಷಿಸಿದ ಅವರು, ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಕೊರತೆ ಉಂಟಾಗಬಾರದು. ನೀರಿನ ಮೂಲ ಇರುವಂತಹ ಸ್ಥಳಗಳು ಹಾಗೂ ಬೋರ್‌ವೆಲ್‌ಗಳ ಪಾಯಿಂಟ್‌ಗಳನ್ನು ಗುರುತಿಸಿಕೊಂಡು, ಬಾವಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಆರ್.ಡಬ್ಲೂೃ.ಎಸ್ ಕಾಮಗಾರಿಗಳ ಮಂದಗತಿಯ ನಡೆಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಕಾಮಗಾರಿಗಳನ್ನು ವೇಗವಾಗಿ ನಡೆಸಿ ತಕ್ಷಣವೇ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಹಾಸ್ಟೆಲ್‌ನಲ್ಲಿ ಬಿಸಿಯೂಟ ಸವಿದ ಸಿಇಒ: ನಗರದ ಸಮಾಜ ಕಲ್ಯಾಣ ಹಾಗೂ ಬಿಸಿಎಂ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ ಗಜಾನನ ಬಾಲೆ ಅವರು, ವಿದ್ಯಾರ್ಥಿನಿಯರು ಕುಳಿತುಕೊಳ್ಳುವ ಜಾಗೆಯಲ್ಲೇ ಕುಳಿತು ಬಿಸಿಯೂಟ ಸವಿದು ಗುಣಮಟ್ಟ ಪರಿಶೀಲಿಸಿದರು. ಹಾಸ್ಟೆಲ್‌ನಲ್ಲಿರುವ ಗ್ರಂಥಾಲಯವನ್ನು ಅತ್ಯಂತ ವ್ಯವಸ್ಥಿತವಾಗಿ ಇಟ್ಟುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
"
ಛತ್ರಿ ಹಿಡಿದು ಪರಿಶೀಲನೆ
ನಗರದಲ್ಲಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದ ಜಿಪಂ ಸಿಇಒ ಗಜಾನನ ಬಾಲೆ ಅವರು, ತಾವೇ ಖುದ್ದಾಗಿ ಛತ್ರಿ ಹಿಡಿದುಕೊಂಡು ಹಾಸ್ಟೆಲ್ ಹಾಗೂ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಇಡೀ ದಿನ ತಾಲೂಕಿನಾದ್ಯಂತ ಸಂಚರಿಸಿದ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಚುರುಕು ಮುಟ್ಟಿಸಿದರು.