ಗೋಕಾಕನಲ್ಲಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಿ.ವಿಷ್ಣು ಪ್ರಸಾದ, ಡಾ.ವಿಶ್ವನಾಥ ಶಿಂಧೋಳಿಮಠ, ಅಡಿವೇಶ ಗವಿಮಠ ಇತರರಿದ್ದರು.
ಗೋಕಾಕ: ವಿದ್ಯಾರ್ಥಿಗಳು ಜೀವನದಲ್ಲಿ ನಿರಂತರ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಂಡರೆ ಸಾಧಕರಾಗಲು ಸಾಧ್ಯ ಎಂದು ಐಸಿಟಿ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥ ಡಿ.ವಿಷ್ಣುಪ್ರಸಾದ ಹೇಳಿದರು.
ನಗರದ ಸಿದ್ಧಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯದಲ್ಲಿ ಬುಧವಾರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಐಸಿಟಿ ಅಕಾಡೆಮಿ ಸಂಸ್ಥೆ ಮತ್ತು ಐಬಿಎಂ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕೌಶಲ ನಿರ್ಮಾಣ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ವಯಂ ಓದು, ಸಂವಹನ ಕೌಶಲ ರೂಢಿಸಿಕೊಂಡು ಸಾಮಾನ್ಯ ಜ್ಞಾನ ಮತ್ತು ಭಾಷೆಯ ಮೇಲೆ ಹಿಡಿತ ಸಾಧಿಸಬೇಕು. ರಾಜ್ಯಾದ್ಯಂತ ಕೇವಲ 30 ಕಾಲೇಜುಗಳಿಗೆ ಐಸಿಟಿ ಅಕಾಡೆಮಿ ಸಂಸ್ಥೆ ತರಬೇತಿ ನೀಡುತ್ತದೆ. ಈ ತರಬೇತಿಯ ಲಾಭ ಪಡೆದು ಸಾಧಕರಾಗಬೇಕು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಡಾ.ವಿಶ್ವನಾಥ ಶಿಂಧೋಳಿಮಠ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕೆ ಸೀಮಿತರಾಗದೆ ಸಮೂಹ ಸಂವಹನ ಕೌಶಲ ಕಲಿಯಬೇಕು. ತಂತ್ರಜ್ಞಾನ ಯುಗದಲ್ಲಿ ಕಾಪಿ&ಪೆೇಸ್ಟ್ ಮಾಡದೆ ಸತ್ಯಾಸತ್ಯತೆ ದೃಢೀಕರಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಐಸಿಟಿ ಅಕಾಡೆಮಿಯ ಪ್ರವಿಣ ಗಸ್ತಿ, ತರಬೇತುದಾರ ಶಶಿಕಾಂತ ಇತರರಿದ್ದರು.