ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಸ್ಫೋಟಕ ತಿರುವು: ಶೆಡ್ ಸೆಕ್ಯೂರಿಟಿ ಗಾರ್ಡ್​ ಹೇಳಿಕೆಯಿಂದ ಪ್ರಾಸಿಕ್ಯೂಷನ್‌ಗೆ ಮತ್ತೊಂದು ಆಘಾತ! 
ರಾಜ್ಯ

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಸ್ಫೋಟಕ ತಿರುವು: ಶೆಡ್ ಸೆಕ್ಯೂರಿಟಿ ಗಾರ್ಡ್​ ಹೇಳಿಕೆಯಿಂದ ಪ್ರಾಸಿಕ್ಯೂಷನ್‌ಗೆ ಮತ್ತೊಂದು ಆಘಾತ! Renukaswamy Case

ಕೃತ್ಯ ನಡೆದ ದಿನ ಶೆಡ್‌ನಲ್ಲಿ ಏನೆಲ್ಲಾ ನಡೆಯಿತು ಎಂಬ ಬಗ್ಗೆ ತನಗೆ ಕಿಂಚಿತ್ತೂ ಮಾಹಿತಿಯಿಲ್ಲ ಎಂದು ಹೇಳುವ ಮೂಲಕ ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರಿಗೆ (ಪ್ರಾಸಿಕ್ಯೂಷನ್) ನರೇಂದ್ರ ಸಿಂಗ್​ ಭಾರಿ ಹಿನ್ನಡೆ ಉಂಟುಮಾಡಿದ್ದಾರೆ.

ಬೆಂಗಳೂರು: ಇಡೀ ರಾಜ್ಯದ ಕುತೂಹಲ ಕೆರಳಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ( Renukaswamy Case ) ವಿಚಾರಣೆಯಲ್ಲಿ ಮತ್ತೊಂದು ಅನಿರೀಕ್ಷಿತ ಹಾಗೂ ನಾಟಕೀಯ ತಿರುವು ಎದುರಾಗಿದೆ. ಇಡೀ ಪ್ರಕರಣಕ್ಕೆ ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಿದ್ದ ಪಟ್ಟಣಗೆರೆ ಶೆಡ್‌ನ ಭದ್ರತಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್) ನರೇಂದ್ರ ಸಿಂಗ್ ನ್ಯಾಯಾಲಯದ ಕಟಕಟೆಯಲ್ಲಿ ಸಂಪೂರ್ಣವಾಗಿ ಉಲ್ಟಾ ಹೊಡೆದಿದ್ದಾನೆ.

ಕೃತ್ಯ ನಡೆದ ದಿನ ಶೆಡ್‌ನಲ್ಲಿ ಏನೆಲ್ಲಾ ನಡೆಯಿತು ಎಂಬ ಬಗ್ಗೆ ತನಗೆ ಕಿಂಚಿತ್ತೂ ಮಾಹಿತಿಯಿಲ್ಲ ಎಂದು ಹೇಳುವ ಮೂಲಕ ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರಿಗೆ (ಪ್ರಾಸಿಕ್ಯೂಷನ್) ನರೇಂದ್ರ ಸಿಂಗ್​ ಭಾರಿ ಹಿನ್ನಡೆ ಉಂಟುಮಾಡಿದ್ದಾರೆ.

ನಗರದ 59ನೇ ಸಿಸಿಎಚ್ ಕೋರ್ಟ್‌ನಲ್ಲಿ ಇಂದು ಸಾಕ್ಷಿ ವಿಚಾರಣೆ ನಡೆಯಿತು. ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಆರೋಪಿಗಳನ್ನು ಗುರುತಿಸುವಂತೆ ಸೂಚಿಸಿದಾಗ, ನರೇಂದ್ರ ಸಿಂಗ್ ಯಾರೊಬ್ಬರನ್ನೂ ಗುರುತಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಆದರೆ, ಪ್ರಕರಣದ 10ನೇ ಆರೋಪಿ (A10) ವಿನಯ್ ಅವರನ್ನು ಮಾತ್ರ ಗುರುತಿಸಿರುವ ಸಾಕ್ಷಿ, ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದಾಗಿನಿಂದಲೂ ವಿನಯ್ ಪರಿಚಯವಿದೆ ಮತ್ತು ಅವರು ಕೆಂಪು ಬಣ್ಣದ ಕಾರು ಬಳಸುತ್ತಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಕೊಲೆ ನಡೆದ ದಿನ ಆ ಕೆಂಪು ಕಾರು ಶೆಡ್ ಒಳಗೆ ಬಂದಿತ್ತೇ ಎಂಬ ನಿರ್ಣಾಯಕ ಪ್ರಶ್ನೆ ಎದುರಾದಾಗ "ನನಗೆ ಸರಿಯಾಗಿ ನೆನಪಿಲ್ಲ" ಎನ್ನುವ ಮೂಲಕ ಜಾಣ್ಮೆಯಿಂದ ಜಾರಿಕೊಂಡಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ನೀಡಿದ ಈ ವ್ಯತಿರಿಕ್ತ ಹೇಳಿಕೆಗಳಿಂದ ಅಸಮಾಧಾನಗೊಂಡ ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್, ನರೇಂದ್ರ ಸಿಂಗ್ ಅವರನ್ನು 'ಪ್ರತಿಕೂಲ ಸಾಕ್ಷಿ' ಎಂದು ಘೋಷಿಸುವಂತೆ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಈ ಹೈಪ್ರೊಫೈಲ್ ಕೇಸ್‌ನಲ್ಲಿ ಪುನೀತ್, ಯಶಸ್ ಸೂರ್ಯ ಹಾಗೂ ಖುದ್ದು ಮೃತ ರೇಣುಕಾಸ್ವಾಮಿ ಅವರ ತಾಯಿ ಕೂಡ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿರುವ ಬೆನ್ನಲ್ಲೇ, ಈಗ ಶೆಡ್ ಸೆಕ್ಯೂರಿಟಿ ಗಾರ್ಡ್ ಕೂಡ ಅದೇ ಹಾದಿ ಹಿಡಿದಿರುವುದು ಪ್ರಾಸಿಕ್ಯೂಷನ್ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇನ್ನು, ನರೇಂದ್ರ ಸಿಂಗ್ ಅವರನ್ನು ಹಿಂದಿ ಭಾಷೆಯಲ್ಲಿ ಪಾಟೀಸವಾಲಿಗೆ (Cross Examination) ಒಳಪಡಿಸಲು ಸಮಯಾವಕಾಶ ನೀಡಬೇಕು ಹಾಗೂ ಅಗತ್ಯವಿದ್ದರೆ ಭಾಷಾಂತರಕಾರರ ನೆರವು ಪಡೆಯುವುದಾಗಿ ಎಸ್‌ಪಿಪಿ ನ್ಯಾಯಾಲಯವನ್ನು ಕೋರಿದರು. ಇದಕ್ಕೆ ನಟ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಾದ ಮಂಡಿಸಿದರು. ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಅಂತಿಮವಾಗಿ ನರೇಂದ್ರ ಸಿಂಗ್ ಅವರ ಪಾಟೀಸವಾಲನ್ನು ಸೋಮವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.