ಸಿದ್ಧಾರ್ಥ್ ಪರ್ಸುನೂರ್ 
ರಾಜ್ಯ

ಮಜಾ ಭಾರತ ರಿಯಾಲಿಟಿ ಶೋ ಕಲಾವಿದ ಸಿದ್ಧಾರ್ಥ್ ಪರ್ಸುನೂರ್ ಶವವಾಗಿ ಪತ್ತೆ; ಕೊಲೆ ಶಂಕೆ | Siddharth Parsunur

ಕಲಬುರಗಿ: ಕನ್ನಡ ಖಾಸಗಿ ವಾಹಿನಿಯ 'ಮಜಾ ಭಾರತ' ರಿಯಾಲಿಟಿ ಶೋನ ಹಾಸ್ಯ ಕಲಾವಿದ ಸಿದ್ಧಾರ್ಥ್ ಪರ್ಸುನೂರ್ (Siddharth Parsunur) ಸೋಮವಾರ(ಜೂ. 15) ಹುಮ್ನಾಬಾದ್ ತಾಲ್ಲೂಕಿನ ಹೊನ್ನಕುಣಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಹುಮನಾಬಾದ್‌ನ ಟೀಚರ್ಸ್ ಕಾಲೋನಿ ನಿವಾಸಿಯಾಗಿರುವ ಸಿದ್ದಾರ್ಥ್(36), ಹುಮನಾಬಾದ್ ನಗರಸಭೆ ಮಾಜಿ ಅಧ್ಯಕ್ಷೆ ಕಸ್ತೂರಿಬಾಯಿ ಪರ್ಸುನೂರ ಅವರ ಪುತ್ರ. ಜೂನ್ 13ರಂದು ಸ್ನೇಹಿತರೊಂದಿಗೆ ಮನೆಯಿಂದ ಹೊರಗೆ ಹೋಗಿದ್ದ ಅವರು ವಾಪಸ್ ಹಿಂತಿರುಗಿರಲಿಲ್ಲ. ಮೂರು ದಿನಗಳ ಬಳಿಕ ಕುಟುಂಬಸ್ಥರು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದ ಪೊಲೀಸರು ಆತನ ಮೊಬೈಲ್ ಟವರ್ ಸ್ಥಳವನ್ನು ಪತ್ತೆಹಚ್ಚಿದರು. ಹೊನ್ನಕುಣಿ ರಸ್ತೆಯ ಅರಣ್ಯ ಪ್ರದೇಶದಿಂದ ಆತನ ಶವವನ್ನು ವಶಪಡಿಸಿಕೊಂಡಿದ್ದು, ಬ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).