ಮಸ್ಕಿ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಮೊಹರಂ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ಸಿಪಿಐ ರಾಮಪ್ಪ ಜಲಗೇರಿ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಇದ್ದರು.
ಮಸ್ಕಿ: ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬವನ್ನು ಶಾಂತಿ, ಸೌಹಾರ್ದದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಅವರಣದಲ್ಲಿ ಹಮ್ಮಿಕೊಂಡಿದ್ದ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದರು. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಎಲ್ಲರೂ ಸಹೋದರತ್ವದಿಂದ ಹಬ್ಬ ಆಚರಿಸಬೇಕು.
ಅಲಾಯಿ ಆಡುವ ಸಂದರ್ಭದಲ್ಲಿ ಸಣ್ಣ-ಪುಟ್ಟ ವಾಗ್ವಾದ ನಡೆದರೂ ಹಿರಿಯರು ಅಲ್ಲಿಯೇ ಸರಿಪಡಿಸಬೇಕು. ಹಬ್ಬದ ನೆಪದಲ್ಲಿ ಶಾಂತಿ ಕದಡುವ ಕೆಲಸ ಯಾರೂ ಮಾಡಬಾರದು. ಕಾನೂನು ಮೀರಿ ವರ್ತಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಕಾಂಗ್ರೆಸ್ ಮುಖಂಡ ಬಸವನಗೌಡ ಪೊಪಾ, ಸಾಹಿತಿ ಸಿ.ದಾನಪ್ಪ ನಿಲೋಗಲ್, ಜಿಲಾನಿ ಖಾಜಿ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ಸಿಪಿಐ ರಾಮಪ್ಪ ಜಲಗೇರಿ, ಪಿಎಸ್‌ಐ ಕೆ.ರಂಗಯ್ಯ, ಮುಖ್ಯಾಧಿಕಾರಿ ನರಸರೆಡ್ಡಿ, ಮುಖಂಡರಾದ ದೊಡ್ಡಪ್ಪ ಮುರಾರಿ, ದೊಡ್ಡಕರಿಯಪ್ಪ, ಚೇತನ ಪಾಟೀಲ್, ಶಬ್ಬೀರ್ ಚೌದ್ರಿ, ದುರ್ಗರಾಜ್ ವಟಗಲ್, ಆರ್.ಕೆ.ನಾಯಕ, ಕಿರಣ್ ಮುರಾರಿ ಇತರರಿದ್ದರು.