Maintain dignity  
ರಾಜ್ಯ

ಸಂಪಾದಕೀಯ: ಘನತೆ ಉಳಿಸಿಕೊಳ್ಳಿ

ಬಾಬುಪ್ರಸಾದ್​ ಮೋಡಿಸ್​
ರಾಜಕೀಯ ಪಕ್ಷಗಳಲ್ಲಿ ಜನದನಿಯ ಕುರಿತಂತೆ, ಜನರ ಆಶೋತ್ತರಗಳ ಕುರಿತಂತೆ ಚರ್ಚೆ ನಡೆಯಬೇಕು. ಆದರೆ, ದುರದೃಷ್ಟವಶಾತ್ ರಾಜಕೀಯ ಪಕ್ಷಗಳ ಮುಖಂಡರ, ಕಾರ್ಯಕರ್ತರ ಕಲಹವೇ ಕಿವಿಗೆ ಅಪ್ಪಳಿಸುತ್ತಿದೆ. ರಾಜಕೀಯ ಪಕ್ಷಗಳ ನಡುವೆ ವಿಚಾರಭೇದ ಸ್ವಾಭಾವಿಕವೇ. ಆದರೆ, ಇದು ವೈಯಕ್ತಿಕ ದ್ವೇಷ, ಈರ್ಷ್ಯೆ, ಮತ್ಸರಗಳಿಗೆ ಕಾರಣವಾಗಬಾರದು. ಜನವರಿ 5ರಂದು ಉತ್ತರ ಕರ್ನಾಟಕ ಭಾಗದ ಬೀದರ್, ಕೊಪ್ಪಳ, ಬೆಳಗಾವಿ, ಅಥಣಿ ಮತ್ತು ಸಿಂಧನೂರಿನಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಮುಖಂಡರ ಪರವಾಗಿ ನಡೆಸಿದ ಪ್ರತಿಭಟನೆ ಎಲ್ಲೆ ಮೀರಿತು. ಹೊಡೆದಾಟ, ಬಡಿದಾಟದಂಥ ಸ್ಥಿತಿ ಸೃಷ್ಟಿಯಾಯಿತು. ಜನಪ್ರತಿನಿಧಿಗಳ ನಡುವೆಯೇ ತೀವ್ರ ಮಾತಿನ ಚಕಮಕಿ ನಡೆದು, ಪರಸ್ಪರ ಹಲ್ಲೆಗೆ ಮುಂದಾದ ಅಹಿತಕರ ಘಟನೆಗಳು ನಡೆದಿದ್ದು, ಇದು ರಾಜ್ಯದ ರಾಜಕೀಯ ಸಂಸ್ಕೃತಿಗೆ ಶೋಭೆ ತರುವಂಥದ್ದಲ್ಲ.
ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯ ನಡುವಿನ ವಿವಾದ ತಾರಕಕ್ಕೇರಿ ಕೈ ಕೈ ಮಿಲಾಯಿಸಿ ಹೊಡೆದಾಟಕ್ಕೆ ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿ ಮಾರಾಮಾರಿಯನ್ನು ತಡೆದರು. ನಾಯಕರೇ ಹೀಗೆ ಸಭೆಗಳಲ್ಲಿ ಇಲ್ಲವೆ ನಡುಬೀದಿಯಲ್ಲಿ ಕಾದಾಟಕ್ಕೆ ಇಳಿದರೆ, ಕಾರ್ಯಕರ್ತರಿಗೆ ಏನು ಸಂದೇಶ ರವಾನೆಯಾಗುತ್ತದೆ. ಅಲ್ಲದೆ, ಇಂಥ ಬೆಳವಣಿಗೆಗಳು ಆಯಾ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ದೊಡ್ಡ ಹಿನ್ನಡೆಯಾಗಿ, ವಿವಾದಗಳೇ ಸದ್ದು ಮಾಡುತ್ತವೆ ಎಂಬುದನ್ನು ಮರೆಯುವಂತಿಲ್ಲ.
ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಥಣಿಯಲ್ಲಿ ಸೋಮವಾರ ಶಾಸಕ ಲಕ್ಷ್ಮಣ ಸವದಿ ಪರ ಹಾಗೂ ವಿರುದ್ಧ ಪ್ರತ್ಯೇಕ ಪ್ರತಿಭಟನೆಗಳು ನಡೆದು, ಈ ಸಂದರ್ಭದಲ್ಲಿ ಕಾರ್ಯಕರ್ತರ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸಿಂಧನೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾರ್ದಲಿ ಅವರಿಗೆ ಭಾಷಣ ಮಾಡಲು ಅವಕಾಶ ನೀಡದೆ ಇರುವುದಕ್ಕೆ ಕಾರ್ಯಕರ್ತರು ದೊಡ್ಡ ರಾದ್ಧಾಂತವನ್ನೇ ನಡೆಸಿದರು. ಕೊಪ್ಪಳದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಅವರತ್ತ ಕುರ್ಚಿ ಬೀಸಿದ್ದಲ್ಲದೆ, ಕೆಲವರು ವಾಗ್ವಾದ ನಡೆಸಿದರು.
ಬಳ್ಳಾರಿಯಲ್ಲಿ ಬ್ಯಾನರ್ ವಿವಾದಕ್ಕೆ ಸಂಬಂಧಿಸಿದ ವಿವಾದ ಘರ್ಷಣೆಗೆ ತಿರುಗಿ ಗುಂಡು ಹಾರಿದ್ದರಿಂದ ಓರ್ವ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡ ಘಟನೆಯ ಕಹಿನೆನಪು ಇನ್ನು ಹಸಿರಾಗಿರುವಾಗಲೇ ಸರಣಿ ಅಹಿತಕರ ಘಟನೆಗಳು ಸಂಭವಿಸಿವೆ. ಮಾತಿನ ಚಕಮಕಿ ಮತ್ತು ಕೈ-ಕೈ ಮಿಲಾಯಿಸುವ ಹಂತಕ್ಕೆ ಈ ಜಗಳಗಳು ಹೋಗುತ್ತಿರುವುದು ಅಪಾಯಕಾರಿ ಮುನ್ಸೂಚನೆ. ಯಾವುದೇ ರಾಜಕೀಯ ಪಕ್ಷವಾಗಲಿ ಟೀಕೆಯನ್ನು ಸಹಿಸಿಕೊಳ್ಳುವ, ವಿರೋಧಿಗಳ ಮಾತನ್ನು ಆಲಿಸುವ ತಾಳ್ಮೆ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಸಂಯಮದ ರಾಜಕಾರಣ ಮರೆಯಾಗುತ್ತಿದ್ದು, ಹೈಡ್ರಾಮಾಗಳು ಬೇಸರ ಮೂಡಿಸುತ್ತಿವೆ. ಜನಪ್ರತಿನಿಧಿಗಳಿಗೆ ಅವರ ಅಭಿಪ್ರಾಯ ಹೇಳಲು ಇಂದಿನ ದಿನಗಳಲ್ಲಿ ವಿವಿಧ ಬಗೆಯ ವೇದಿಕೆಗಳಿವೆ. ಆದರೂ, ಅಬ್ಬರದ ದನಿಯಲ್ಲಿ, ಅವಾಚ್ಯ ಶಬ್ದಗಳಿಂದಲೇ ಅದನ್ನು ಹೇಳಬೇಕು ಎಂಬ ಹಠ ಏಕೆ? ಜನಪ್ರತಿನಿಧಿಗಳು ಅವಲೋಕನ ಮಾಡಿಕೊಂಡು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡರೆ, ಕಾರ್ಯಕರ್ತರು ಕೂಡ ತಾಳ್ಮೆಯ ಪಾಠ ಕಲಿಯುತ್ತಾರೆ.