ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಲಾದಗಿ ಪ್ರವೇಶ ರಸ್ತೆಯಲ್ಲಿರುವ ತಗ್ಗು ದಿನ್ನೆಗಳು. 
ರಾಜ್ಯ

ಕಲಾದಗಿ ಪ್ರದೇಶದ ಮುಖ್ಯ ರಸ್ತೆ ಅದ್ವಾನ

ಪ್ರಮುಖ ಮುಖ್ಯಾಂಶಗಳು

  • ಧೂಳುಮಯ, ತಗ್ಗುದಿನ್ನೆಗಳ ರಸ್ತೆ
  • ಅಪಾಯದ ಸಂಚಾರಕ್ಕೆ ಜನ ಹೈರಾಣ

ಕಲಾದಗಿ: ಹಿರೇಸಂಶಿ ಕ್ರಾಸ್‌ನಿಂದ ಗ್ರಾಮವನ್ನು ಪ್ರವೇಶಿಸುವ ಪ್ರಮುಖ ರಸ್ತೆ ಕಳೆದ ಅನೇಕ ವರ್ಷಗಳಿಂದ ಬಹುತೇಕ ಹಾಳಾಗಿದೆ. ಈ ರಸ್ತೆಯಲ್ಲಿ ತಗ್ಗುದಿನ್ನೆಗಳಿಂದ ಸರ್ಕಸ್ ಮಾಡುತ್ತ ತಗ್ಗುಗಳನ್ನು ತಪ್ಪಿಸಿಕೊಂಡು ಸಂಚಾರ ಮಾಡುವುದೇ ದೊಡ್ಡ ಸಾಹಸವಾಗಿದೆ.

ಇದೇ ರಸ್ತೆಯಲ್ಲಿರುವ ಹೆರಕಲ್ (ದಕ್ಷಿಣ) ಏತ ನೀರಾವರಿ ಜಾಕ್‌ವೆಲ್ ಕಾಲುವೆ ಮೇಲ್ಭಾಗದ ರಸ್ತೆ ಮೂರು ವರ್ಷಗಳ ಹಿಂದೆ ಸಂಚಾರಕ್ಕೆ ಮುಕ್ತವಾಗಿದ್ದು, ಹಿನ್ನೀರಿನಿಂದ ರಸ್ತೆ ಬಂದ್ ಆಗಬಾರದೆಂದು ಕಾಲುವೆ ಸೇತುವೆಯೊಂದಿಗೆ ರಸ್ತೆಯನ್ನು ಎತ್ತರಿಸಲಾಗಿದೆ. ಈ ರಸ್ತೆ ಎತ್ತರವಾದಾಗಿನಿಂದಲೂ ತಗ್ಗುದಿನ್ನೆಗಳ ಮಯವಾಗಿ ಧೂಳಿನಿಂದ ಸವಾರರು ಹೈರಾಣಾಗುತ್ತಿದ್ದಾರೆ.
ರಸ್ತೆಯುದ್ದಕ್ಕೂ ದೊಡ್ಡ ಪ್ರಮಾಣದ ಗುಂಡಿಗಳು ಸಂಚಾರ ಮಾಡುವವರಿಗೆ ಅಪಾಯದ ಆಹ್ವಾನ ನೀಡುತ್ತಿದ್ದು, ರಾತ್ರಿ ವೇಳೆ ಸವಾರರು ಬೀಳುತ್ತಿರುವುದು ಸಾಮಾನ್ಯವಾಗಿದೆ. ರಸ್ತೆ ಹಾಳಾಗಿ ಭಾರಿ ಧೂಳಿನಿಂದ ನಡೆದುಕೊಂಡು ಹೋಗುತ್ತಿರುವವರು, ಸಣ್ಣ ಪುಟ್ಟ ವಾಹನ ಸವಾರರು ತತ್ತರಿಸುವಂತಾಗಿದೆ.
ರಸ್ತೆಯನ್ನು ದುರಸ್ತಿಗೊಳಿಸಿ, ಡಾಂಬರೀಕರಣ ಮಾಡಿ ಎಂಬ ಮನವಿಗೆ ಸಂಬಂಧಿಸಿದ ಇಲಾಖೆಯವರದ್ದು ಮಾತ್ರ ಇದ್ದು ಇಲ್ಲದ ದುಸ್ಥಿತಿ, ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಅಪಾಯಕಾರಿ ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು ಲೋಕೋಪಯೋಗಿ ಇಲಾಖೆಯವರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇಬ್ಬರು ಶಾಸಕರ ಅವಧಿಗೂ ಮುಗಿಯದ ಕಾಮಗಾರಿ

ಈ ಕಾಮಗಾರಿಗೇಕೋ ಅದೆನೋ ಶಾಪ ಇದ್ದಂತಿದೆ. ಆರು ತಿಂಗಳಲ್ಲಿ ಸಂಪೂರ್ಣಗೊಳ್ಳಬೇಕು ಎಂಬ ಕರಾರಿನ ಸೇತುವೆ ಹಾಗೂ ರಸ್ತೆ ನಿರ್ಮಾಣದ ಕಾಮಗಾರಿಗೆ 2021 ಏಪ್ರಿಲ್‌ನಲ್ಲಿ ಅಂದು ಶಾಸಕರಾಗಿದ್ದ ಮುರುಗೇಶ ನಿರಾಣಿ ಅವರು ಭೂಮಿಪೂಜೆ ನೆರವೇರಿಸಿ ಜನರ ಬಹುದಿನದ ಆಸೆಗೆ ಇಂಬು ನೀಡಿದ್ದರಾದರೂ, ಆದರೆ ಅದೇಕೋ ಕಾಮಗಾರಿ ನಿರೀಕ್ಷೆಯಂತೆ ನಡೆಯಲೇ ಇಲ್ಲ.

ಶಾಸಕ ಜೆ.ಟಿ. ಪಾಟೀಲ ಅವರು ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಮೊದಲು ಕೈ ಹಾಕಿದ್ದೇ ಈ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಮೇಲಿಂದ ಮೇಲೆ ಅವರು ಖಡಕ್ ಸೂಚನೆ ನೀಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರ ಹಿನ್ನೆಲೆ ಅಂತೂ ಇಂತೂ ಸೇತುವೆ ಕಾಮಗಾರಿ ಮುಕ್ತಾಯಗೊಂಡು ರಸ್ತೆ ಸಂಚಾರಕ್ಕೆ ಮುಕ್ತವಾಗಿ ಜನರ ಸಂತಸಕ್ಕೆ ಕಾರಣವಾಯಿತು ಎಂದು ವರ್ಷಗಳೇ ಕಳೆಯುತ್ತಿದ್ದರೂ ಇದಿನ್ನೂ ಡಾಂಬರೀಕರಣವಾಗದಿರುವುದು ವಿಪರ್ಯಾಸ.

"

ಕಲಾದಗಿ ಪ್ರವೇಶ ರಸ್ತೆಯಲ್ಲಿರುವ ತಗ್ಗುದಿನ್ನೆಗಳಿಂದ ಇದೊಂದು ಅಪಾಯಕಾರಿ ರಸ್ತೆಯಾಗಿದ್ದು, ವಾಹನ ಸವಾರರು ತುಸು ಮೈಮರೆತರು ಅಪಾಯ ಕಟ್ಟಿಟ್ಟಬುತ್ತಿ. ಭಾರಿ ಪ್ರಮಾಣದ ಅನಾಹುತಗಳಾಗುವ ಮೊದಲೇ ರಸ್ತೆ ಡಾಂಬರೀಕರಣ ಮಾಡುವ ಕೆಲಸ ಆಗಬೇಕು. ತುರ್ತಾಗಿ ಅಪಾಯಕಾರಿ ತಗ್ಗುಗಳನ್ನು ಮುಚ್ಚುವ ಕೆಲಸ ಆಗಬೇಕಾಗಿದೆ.

ಬಶೆಟ್ಟೆಪ್ಪ ಅಂಗಡಿ ಯುವ ಮುಖಂಡ ಕಲಾದಗಿ.