Car Explosion in Jamakhandi Hipparagi village
- ಜಮಖಂಡಿಯಲ್ಲಿ ಮಹೀಂದ್ರಾ XUV300 ಕಾರು ಸ್ಫೋಟ ತಪ್ಪಿದ ಭಾರೀ ದುರಂತ.
- ಕಾರು ಸ್ಫೋಟಗೊಂಡ ತೀವ್ರತೆಗೆ ಕಾರಿನ ಬಿಡಿ ಭಾಗಗಳು ಚೆಲ್ಲಾಪಿಲ್ಲಿ, ಸಿಮೆಂಟ್, ವೈನ್ ಬಾಟಲ್ಗಳು ನಾಶ.
- ಬಾಂಬ್ ಸ್ಫೋಟಗೊಂಡಿರಬಹುದು ಎಂಬ ಅನುಮಾನವೂ ವ್ಯಕ್ತ.
ಜಮಖಂಡಿ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬಳಿಯ ಬಾರ್ವೊಂದರ ಮುಂದೆ ನಿಲ್ಲಿಸಿದ್ದ ಕಾರೊಂದು ಸ್ಫೋಟಗೊಂಡ ಘಟನೆ ಬೆಳಕಿಗೆ ಬಂದಿದೆ. ಸ್ಪೋಟಗೊಂಡಿರುವ ಕಾರು ಎಂ.ಜಿ. ತೋರಗಲ್ ಎಂಬುವರ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ.
ಕಾರು ಸ್ಫೋಟಗೊಂಡ ತೀವ್ರತೆಗೆ ಕಾರಿನ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮಳಿಗೆಯ ಗೋಡೆಗಳ ಸಿಮೆಂಟ್ ಕಳಚಿ ಬಿದ್ದಿವೆ. ಕೂಲ್ ಡ್ರಿಂಕ್ಸ್ ಬಾಟಲ್ಗಳು ನೆಲಕ್ಕೆ ಬಿದ್ದು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಘಟನೆ ಬಗ್ಗೆ ಮಾಹಿತಿ ಸಿಕ್ಕುತ್ತಲೇ ಸ್ಥಳಕ್ಕೆ ಬಂದ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಪೊಲೀಸರಿಂದ ಸ್ಥಳ ಪರಿಶೀಲನೆ
ಸೊಕೊ ಟೀಂ ಮತ್ತು ಜಮಖಂಡಿ ಗ್ರಾಮೀಣ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣದಿಂದ ಸ್ಪೋಟ ಆಗಿದೆ ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ.
ಏನಾಗಿತ್ತು ಶನಿವಾರ ಸಂಜೆ?
ಶನಿವಾರ ಸಂಜೆ 4:30ರ ಸುಮಾರಿಗೆ ಕಾರನ್ನು ತಂದು ಬಾರ್ ಬಳಿ ನಿಲ್ಲಿಸಲಾಗಿತ್ತು. ರಾತ್ರಿ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಏಕಾಏಕಿ ಸ್ಫೋಟದ ಶಬ್ದ ಕೇಳಿಸಿದೆ. ಬಾಂಬ್ ಸ್ಫೋಟಗೊಂಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಸ್ಫೋಟದ ತೀವ್ರತೆ ಎಷ್ಟು ಭಯಾನಕವಾಗಿತ್ತೆಂದರೆ, ಈ ಘಟನೆ ಸಂಭವಿಸಿದ ಸಮಯದಲ್ಲಿ ಪೂಜಾರಿ ಎಂಬ ಹುಡುಗ ಸ್ವಲ್ಪ ದೂರದಲ್ಲಿದ್ದನು. ಆ ಹುಡುಗನೇ ಇದನ್ನು ಮಾಡಿರಬಹುದು ಎಂದು ಸಂದೇಹಿಸಿ ಹಿಡಿದುಕೊಂಡಾಗ, ಆತನಿಗೆ ಗಾಯವಾಗಿರುವುದು ಗೊತ್ತಾಗಿದೆ. ಸದ್ಯ ಆ ಹುಡುಗ ಜಮಖಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವೈನ್ ಶಾಪ್ ಮ್ಯಾನೇಜರ್ ಹನುಮಂತ ತಿಳಿಸಿದ್ದಾರೆ.
ಕಾರು ಸ್ಫೋಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ತಪ್ಪಿದ ಭಾರಿ ಅನಾಹುತ ಹಾಗೂ ಆತಂಕ: ಯಾವುದೇ ಜೀವಹಾನಿಯಿಲ್ಲ: ಸ್ಫೋಟದ ತೀವ್ರತೆಯನ್ನು ಗಮನಿಸಿದರೆ, ಸಂಭವನೀಯ ಭಾರಿ ಅನಾಹುತವೊಂದು ಕೂದಲೆಳೆಯಿಂದ ತಪ್ಪಿದೆ. ಘಟನೆ ವೇಳೆ ಸುತ್ತಮುತ್ತ ದೂಳು ಆವರಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ, (ಏಜೆನ್ಸೀಸ್).