ಡಾ.ಮಹೇಶ್ ಜೋಶಿ 
ರಾಜ್ಯ

ಮತ್ತೆ ಕಸಾಪ ಅಧ್ಯಕ್ಷಗಾದಿಕ್ಕೇರಲು ಮಹೇಶ ಜೋಶಿ ಪ್ರಹಸನ-Mahesh Joshi

ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ಅಧ್ಯಕ್ಷರಾಗಿದ್ದ ಡಾ.ಮಹೇಶ ಜೋಶಿ, ಮತ್ತೆ ಅಧ್ಯಕ್ಷಗಾದಿಕ್ಕೇರಲು ಪ್ರಹಸನ ಶುರು ಮಾಡಿದ್ದಾರೆ.
ಕಸಾಪ ಆಡಳಿತಾಧಿಕಾರಿ ಅವಧಿ ಮತ್ತು ವಿಚಾರಣೆ ಪೂರ್ಣಗೊಂಡಿದೆ ಎಂದು ಭಾವಿಸಿದ ಮಹೇಶ ಜೋಶಿ, ಮತ್ತೆ ಅಧ್ಯಕ್ಷರಾಗಿ ಮುಂದುವರಿಯಲು ಶನಿವಾರ ಬೆಳಗ್ಗೆ ಚಾಮರಾಜಪೇಟೆಯ ಕಸಾಪದ ಕೇಂದ್ರ ಕಚೇರಿಗೆ ವಕೀಲರೊಂದಿಗೆ ಆಗಮಿಸಿದ್ದರು. ಈ ವೇಳೆ ಆಡಳಿತಾಧಿಕಾರಿಯ ಕಚೇರಿ ಬೀಗ ತರೆಯಲು ಸಿಬ್ಬಂದಿಗೆ ಸೂಚಿಸಿದ್ದರು. ಇದಕ್ಕೆ ಒಪ್ಪದ ಕಸಾಪ ಸಿಬ್ಬಂದಿ, ಬೀಗ ತರೆಯಲು ಹಿಂದೇಟು ಹಾಕಿದರು. ಆಡಳಿತಾಧಿಕಾರಿ ಕಚೇರಿ ಮುಂಭಾಗ ಕೆಲಕಾಲ ಕುಳಿತು ವಕೀಲರೊಂದಿಗೆ ಚರ್ಚಿಸಿದರು.
ಈ ಬಗ್ಗೆ ವಿಷಯ ತಿಳಿದ ತಕ್ಷಣ ವಿಶ್ವೇಶ್ವರಯ್ಯಪುರ ಪೊಲೀಸ್ ಠಾಣೆ ಸಿಬ್ಬಂದಿ ಕಸಾಪಕ್ಕೆ ಆಗಮಿಸಿದರು.ವಿ.ವಿ.ಪುರ ವಿಭಾಗದ ಎಸಿಪಿ ಶಾಮೀದ್ ಬಾಷಾ, ಸ್ಥಳಕ್ಕೆ ಧಾವಿಸಿ, ಸಿಬ್ಬಂದಿ ಬಳಿ ಮಾಹಿತಿ ಪಡೆದರು. ಕೆಲ ಸಮಯ ಮಹೇಶ್‌ಜೋಶಿ ಜೊತೆ ಮಾತುಕತೆ ನಡೆಸಿ ಎಸಿಪಿ ತೆರಳಿದರು. ಬಳಿಕ, ಕಸಾಪ ಆಡಳಿತಾಧಿಕಾರಿ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಿದ ಸರ್ಕಾರ ಆದೇಶದ ಬಗ್ಗೆ ಜೋಶಿ ಗಮನಕ್ಕೆ ಸಿಬ್ಬಂದಿ ತಂದರು. ಸರ್ಕಾರದ ಆದೇಶ ಪ್ರತಿ ಪಡೆದ ಜೋಶಿ, ಅದಕ್ಕೆ ಸೀಲ್ ಹಾಕಿಸಿಕೊಂಡು ವಕೀಲರೊಂದಿಗೆ ವಾಪಸ್ ತೆರಳಿದರು.
ನಾನು ಚುನಾಯಿತ ಅಧ್ಯಕ್ಷ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿರಾಗಿರುವ ಕೆ.ಎಂ.ಗಾಯತ್ರಿ ಅವರನ್ನು 3 ತಿಂಗಳ ಅವಧಿಗೆ ಅಥವಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಇದರಲ್ಲಿ ಯಾವುದೇ ಮೊದಲೋ ಅಲ್ಲಿಯವರೆಗೆ ಮಾತ್ರ ಕಸಾಪದ ಆಡಳಿತಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅವರ ಅಧಿಕಾರವಾಧಿ ಈಗಾಗಲೇ ಮುಗಿದಿದೆ. ಅಲ್ಲದೆ, ಹೈಕೋರ್ಟ್‌ನ ಏಕಸದಸ್ಯ ಪೀಠ, 2026ರ ಜ.13ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ವಿಚಾರಣೆ ವರದಿಯನ್ನು ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಯ ಅವಧಿ, ವಿಚಾರಣೆ ಪೂರ್ಣಗೊಂಡಿದ್ದರಿಂದ ಸಹಜವಾಗಿ ಅಧ್ಯಕ್ಷರಾಗಿ ನಾನು ಮುಂದುವರಿಯಬೇಕಾಗುತ್ತದೆ ಎಂದು ಡಾ.ಮಹೇಶ್ ಜೋಶಿ ಹೇಳಿದರು.
ನಾನು ಚುನಾಯಿತ ಅಧ್ಯಕ್ಷರಾಗಿದ್ದು, ಯಾವುದೇ ಕಾರಣಕ್ಕೂ ಕಸಾಪ ಅಧ್ಯಕ್ಷ ಹುದ್ದೆಯನ್ನು ಖಾಲಿ ಬಿಡುವಂತಿಲ್ಲ. ಅಧ್ಯಕ್ಷ ಹುದ್ದೆಯನ್ನು ನಾನು ವಿಸರ್ಜಿಸಿಲ್ಲ. ಕಾರ್ಯಕಾರಿ ಸಮಿತಿಯನ್ನೂ ವಿಸರ್ಜಿಸಿಲ್ಲ. ಆದ್ದರಿಂದ, ಈ ಹುದ್ದೆಯಲ್ಲಿ ಪುನರ್ ಕಾರ್ಯನಿರ್ವಹಿಸಲು ಕಚೇರಿಯಲ್ಲಿ ಹಾಜರಿದ್ದೇನೆ. ಈ ಬಗ್ಗೆ ಕೆ.ಎಂ.ಗಾಯತ್ರಿ ಅವರಿಗೂ ಪತ್ರ ಬರೆದಿದ್ದೇನೆ. ಆದರೆ, ಆಡಳಿತಾಧಿಕಾರಿ ಅವಧಿಯನ್ನು ಮತ್ತೊಮ್ಮೆ ಮೂರು ತಿಂಗಳು ವಿಸ್ತರಿಸಿ ಡಿ.12ರಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಸರ್ಕಾರವು ಇದನ್ನು ಮರೆಮಾಚಿದೆ. ನಮ್ಮ ವಕೀಲರಿಗೆ, ಆಡಳಿತಾಧಿಕಾರಿ ಅವಧಿ ವಿಸ್ತರಿಸಿದ ಆದೇಶ ಕಾಪಿಯನ್ನು ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏನಿದು ಪ್ರಕರಣ?
ಕಸಾಪ ಅಧ್ಯಕ್ಷರಾಗಿದ್ದ ಡಾ.ಮಹೇಶ್ ಜೋಶಿ ವಿರುದ್ಧ ಅಧಿಕಾರ ದುರ್ಬಳಕೆ ಮತ್ತು ಹಣಕಾಸು ದುರುಪಯೋಗ ಸೇರಿ ವಿವಿಧ ಆರೋಪಗಳು ಕೇಳಿಬಂದಿರುವ ಕಾರಣ ರಾಜ್ಯ ಸರ್ಕಾರ, ಕಸಾಪಗೆ ಆಡಳಿತಾಧಿಕಾರಿಯಾಗಿ ಕೆ.ಎಂ.ಗಾಯತ್ರಿ ಅವರನ್ನು ನೇಮಿಸಿ ಆದೇಶ ಹೊರಡಿಸಿತು. ಈ ಆದೇಶಕ್ಕೆ ತಡೆಕೋರಿ ಮಹೇಶ ಜೋಶಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ.