ಹುಣಸೂರಿನಲ್ಲಿ ನಡೆದ ಗುರು-ಶಿಷ್ಯರ ಸ್ನೇಹ ಮಿಲನದಲ್ಲಿ ಗುರುವರ್ಯರನ್ನು ಸನ್ಮಾನಿಸಿದ ವಿಶ್ವಶಾಂತಿ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಮೂಹ.  
ರಾಜ್ಯ

ಗುರು-ಶಿಷ್ಯರ ಮಹಾಸಂಗಮ

ಹುಣಸೂರು: ಎರಡು ದಶಕಗಳ ನಂತರ ಅಕ್ಷರ ಕಲಿಸಿದ 25ಕ್ಕೂ ಹೆಚ್ಚು ಗುರುಗಳನ್ನು 72 ವಿದ್ಯಾರ್ಥಿಗಳು ಸನ್ಮಾನಿಸಿ ಸಾರ್ಥಕ ಭಾವ ಅನುಭವಿಸಿದರು. ಶಿಷ್ಯರ ಪ್ರೀತಿಗೆ ಧನ್ಯತೆಯಿಂದ ಗುರುವೃಂದ ಕಣ್ತುಂಬಿಕೊಂಡಿತು.

ತಾಲೂಕಿನ ರತ್ನಪುರಿಯ ವಿಶ್ವಶಾಂತಿ ಶಿಕ್ಷಣ ಸಂಸ್ಥೆ(ಅನುದಾನಿತ)ಯಲ್ಲಿ 2003-04ರಲ್ಲಿ ಪ್ರೌಢಶಾಲೆ, 2005-06ರಲ್ಲಿ ಪಿ.ಯು. ವ್ಯಾಸಂಗ ಮಾಡಿದ 72 ಹಳೇ ವಿದ್ಯಾರ್ಥಿಗಳ ಬಳಗದ ವತಿಯಿಂದ ಮಂಗಳವಾರ ನಗರದ ಎಸ್‌ಆರ್‌ಕೆ ಪ್ಲಾಜಾದಲ್ಲಿ ಆಯೋಜಿಸಿದ್ದ ಗುರುವಂದನಾ ಮಹಾಸಂಗಮದ ಅಪೂರ್ವ ದೃಶ್ಯಗಳಿವು.
ಇಪ್ಪತ್ತೈದು ವರ್ಷಗಳ ಹಿಂದಿನ ಸಹಪಾಠಿಗಳು ವಾಟ್ಸಪ್ ಗ್ರೂಪ್ ಮಾಡಿಕೊಂಡು ಒಂದೆಡೆ ಸೇರಿ, ಅಂದಿನ ಆಟ-ಪಾಠ, ಶಿಕ್ಷಕ-ಉಪನ್ಯಾಸಕರ ಒಡನಾಟದ ಜತೆಗೆ ಎಲ್ಲರ ಬದುಕಿನ ಬಗೆಗೆ ಚರ್ಚಿಸಿ, ಅಂತಹ ಗುರುಗಳನ್ನು ಒಂದೆಡೆ ಕಲೆ ಹಾಕಿ ಗುರುವಂದನೆಯ ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಗುರು ಮತ್ತು ಶಿಷ್ಯರಲ್ಲಿ ಧನ್ಯತೆಯ ಭಾವ ಮೂಡಿಸುವಲ್ಲಿ ಯಶಸ್ವಿಯಾಯಿತು.

ಶಿಷ್ಯರ ಪ್ರೀತಿಯ ಆಹ್ವಾನ ಮನ್ನಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಗುರುಗಳನ್ನು ಶಿಷ್ಯ ತಂಡ ಪುಷ್ಟವೃಷ್ಟಿ ಮೂಲಕ ಸ್ವಾಗತಿಸಿದರು. ಸಹಿ ಬೋರ್ಡ್‌ನಲ್ಲಿ ಶಿಕ್ಷಕರು ಸಹಿ ದಾಖಲಿಸಿದರು. 25 ಶಿಕ್ಷಕರು-ಉಪನ್ಯಾಸಕರಿಗೆ ಶಿಷ್ಯರು ಮೈಸೂರು ಪೇಠ ತೊಡಿಸಿ, ಶಾಲು ಹೊದಿಸಿ, ಫಲ ತಾಂಬೂಲ ನೀಡಿ, ನೆನಪಿನಲ್ಲಿ ಉಳಿಯುವಂತಹ ಉಡುಗೊರೆ ನೀಡಿ ಗೌರವ ಸಮರ್ಪಿಸಿದರು.

ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಗುರುಗಳು ಪಾಠದ ಜತೆಗೆ ಜೀವನ ಪಾಠ ಹಾಗೂ ಬದುಕಿನ ಕಲೆಯನ್ನು ಮನವರಿಕೆ ಮಾಡಿಕೊಟ್ಟಿರುವ, ವಿವಿಧ ಹುದ್ದೆಗಳನ್ನು ಗಿಟ್ಟಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರ ಪ್ರೋತ್ಸಾಹವನ್ನು ಸ್ಮರಿಸಿದ ಶಿಷ್ಯಪಡೆ ನಿಮ್ಮಿಂದಲೇ ನಾವೆಲ್ಲಾ ಇಷ್ಟು ಎತ್ತರಕ್ಕೆ ಬೆಳೆದಿದ್ದೇವೆ ಎಂದು ಶಿಷ್ಯರಾದ ಮನುಕುಮಾರ್, ಮಂಜು, ಕೃಷ್ಣ, ಮಹದೇವ್, ಆನಂದ, ಪವಿತ್ರ, ಕೋಮಲ ಮತ್ತಿತರರು ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಕೃಷ್ಣಸ್ವಾಮಿ, ಪುಟ್ಟಸ್ವಾಮಿ, ಉಪನ್ಯಾಸಕರಾದ ಪರಮೇಶ್, ಶಿವನಾಯಕ್, ಲೋಕೇಶ್, ನಿವೃತ್ತ ಮುಖ್ಯ ಶಿಕ್ಷಕ ಶಿವಣ್ಣ ಮತ್ತಿತರರು, ನಮ್ಮಿಂದ ಕಲಿತ ನೀವು ಇಂದು ಉನ್ನತ ಸ್ಥಾನದಲ್ಲಿರುವುದು ನಮ್ಮ ಹೆಮ್ಮೆ, ನಿಮ್ಮಗಳ ಅಭಿಮಾನದ ಅಭಿನಂದನೆ ಅವಿಸ್ಮರಣೀಯ ಎಂದರು. ಕಾರ್ಯಕ್ರಮದಲ್ಲಿ ವಿಶ್ವಶಾಂತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿದರು. ಉಪನ್ಯಾಸಕರಾದ ಶಿವಕುಮಾರ್, ಜಯಸ್ವಾಮಿ, ಮಹೇಂದ್ರ, ಶಿಕ್ಷಕರಾದ ಲೋಕೇಶ್, ಗುಂಡಪ್ಪ, ಚಿದಾನಂದಮೂರ್ತಿ ಶಿಕ್ಷಕರು, ಮತ್ತು ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.
16ಊಓ5: .ಹುಣಸೂರಿನಲ್ಲಿ ನಡೆದ ಗುರು-ಶಿಷ್ಯರ ಸ್ನೇಹ ಮಿಲನದಲ್ಲಿ ಗುರುವರ್ಯರನ್ನು ಸನ್ಮಾನಿಸಿದ ವಿಶ್ವಶಾಂತಿ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಮೂಹ.