ಪ್ರಮುಖ ಮುಖ್ಯಾಂಶಗಳು
ವಿಭಿನ್ನ, ವಿಶಿಷ್ಟವಾದ ಪಾರಂಪರಿಕ ಮಾದರಿಯ ಪಾದರಕ್ಷೆಗಳನ್ನು ಧರಿಸಲು ಬಯಸುವವರಿಗೆ ಸಿಹಿ ಸುದ್ದಿ! ಹಿಂದೆ ರಾಜ-ಮಹಾರಾಜರು, ರಾಣಿ-ಮಹಾರಾಣಿಯರು ಬಳಸುತ್ತಿದ್ದ ಮಾದರಿಯ ‘ಮಹಾರಾಜ-ಮಹಾರಾಣಿ’ ಹೆಸರಿನ ಪಾದರಕ್ಷೆಗಳನ್ನು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಮಾರುಕಟ್ಟೆಗೆ ಪರಿಚಯಿಸಿದೆ.
ರಾಜ-ಮಹಾರಾಜರು ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಚರ್ಮದ ಪಾದರಕ್ಷೆಗಳನ್ನು ಧರಿಸುತ್ತಿದ್ದರು. ಇಂತಹ ಚಪ್ಪಲಿಗಳು ಪಾರಂಪರಿಕ ಲುಕ್ ಹೊಂದಿದ್ದವು. ಇದೀಗ ಲಿಡ್ಕರ್ ವತಿಯಿಂದ ಅದೇ ಮಾದರಿಯ ಪಾದರಕ್ಷೆಗಳು ಪಾರಂಪರಿಕ ನಗರಿ ಮೈಸೂರಿನಲ್ಲಿ ತಯಾರಾಗುತ್ತಿವೆ. ಅವುಗಳಿಗೀಗ ಬೇಡಿಕೆಯೂ ಹೆಚ್ಚಿದೆ. ಲಿಡ್ಕರ್ನ ಕುಶಲಕರ್ವಿು ಆಗಿರುವ ರಾಜು ಇವುಗಳ ರೂವಾರಿಯಾಗಿದ್ದಾರೆ.
ಪ್ರಾಯೋಗಿಕವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಲಾಲೋಕದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಹೆಚ್ಚಾಗಿ ವಿದೇಶಿಗರು ಈ ಪಾದರಕ್ಷೆಗಳಿಗೆ ಮನಸೋತಿರುವುದು ಗಮನಾರ್ಹ. ಇದೀಗ ಎಲ್ಲೆಡೆ ಬೇಡಿಕೆ ಹೆಚ್ಚಾಗಿದೆ. ಶೀಘ್ರದಲ್ಲಿ ಲಿಡ್ಕರ್ನ ಎಲ್ಲ ಮಳಿಗೆಗಳಲ್ಲೂ ಪಾದರಕ್ಷೆಗಳು ಲಭ್ಯವಾಗಲಿವೆ.ನೋಡಲು ಸುಂದರ ಹಾಗೂ ಧರಿಸಲು ಆರಾಮದಾಯಕ ಆಗಿರುವ ಕಾರಣಕ್ಕಾಗಿ ಪಾದರಕ್ಷೆಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ವಿದೇಶಿ ಮಹಿಳೆಯರು ಕೂಡ ಮಹಾರಾಣಿ ಮಾದರಿಯ ಪಾದರಕ್ಷೆಗೆ ಮಾರು ಹೋಗಿದ್ದಾರೆ.
ಹತ್ತು ಮಾದರಿಯಲ್ಲಿ ತಯಾರಿ: ‘ಮಹಾರಾಜ-ಮಹಾರಾಣಿ’ ಪಾದರಕ್ಷೆಗಳನ್ನು ಲಿಡ್ಕರ್ನ ಕುಶಲಕರ್ವಿು ರಾಜು ಅವರು ಮೈಸೂರಿನಲ್ಲಿ ತಯಾರಿಸುತ್ತಿದ್ದಾರೆ. ಒಂದು ಜೋಡಿ ಮಹಾರಾಜ ಪಾದರಕ್ಷೆ ತಯಾರಿಸಲು ಒಂದೂವರೆ ದಿನ, ಮಹಾರಾಣಿ ಪಾದರಕ್ಷೆ ತಯಾರಿಸಲು ಒಂದು ದಿನ ಸಮಯ ಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಈ ಚಪ್ಪಲಿಗಳ ತಯಾರಿಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ.
ಆರಂಭದಲ್ಲಿ 7 ಮಾದರಿಯ ಮಹಾರಾಜ, 4 ಮಾದರಿಯ ಮಹಾರಾಣಿ ಪಾದರಕ್ಷೆಗಳನ್ನು ತಯಾರಿಸಿ ಬೆಂಗಳೂರಿನ ಲಿಡ್ಕರ್ ಕಚೇರಿಗೆ ಕಳುಹಿಸಿದ್ದರು. ಇದೀಗ ತಲಾ 10 ಮಾದರಿಯ ಪಾದರಕ್ಷೆಗಳನ್ನು ತಯಾರು ಮಾಡುತ್ತಿದ್ದಾರೆ. ಮಹಾರಾಣಿ ಪಾದರಕ್ಷೆಗಳು 6 ರಿಂದ 10 ಇಂಚು, ಮಹಾರಾಜ ಪಾದರಕ್ಷೆಗಳು 7ರಿಂದ 11 ಇಂಚು ಅಳತೆಯಲ್ಲಿ ತಯಾರು ಮಾಡುತ್ತಿದ್ದಾರೆ. ಚಪ್ಪಲಿಗಳನ್ನು ಸಿದ್ಧ ಮಾಡುವಂತೆ ಲಿಡ್ಕರ್ ಎಂಡಿ ಸೂಚನೆ ನೀಡಿದ್ದರು. ಅದರಂತೆ ವಿಭಿನ್ನ ಮಾದರಿಯ ಪಾದರಕ್ಷೆಗಳನ್ನು ಮಾಡಿಕೊಟ್ಟೆ.
ಈಗ ಮಹಾರಾಜ-ಮಹಾರಾಣಿ ಪಾದರಕ್ಷೆಗೆ ಬಹುಬೇಡಿಕೆ ಬಂದಿದೆ. ಅದರಂತೆ ಪಾದರಕ್ಷೆಯನ್ನು ತಯಾರಿಸಿ ಬೆಂಗಳೂರಿನ ಲಿಡ್ಕರ್ ಕಚೇರಿಗೆ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನ ರೀತಿಯ ಪಾದರಕ್ಷೆಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಲಿಡ್ಕರ್ ಸಿದ್ಧತೆ ನಡೆಸಿದೆ. ಈ ರೀತಿಯ ಪಾದರಕ್ಷೆಗಳು ಶುಭ-ಸಮಾರಂಭಗಳಿಗೆ ಹಾಗೂ ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿವೆ’ ಎನ್ನುತ್ತಾರೆ ಕುಶಲಕರ್ವಿು ರಾಜು.
ಜನರು ಹಳೆಯ ಜೀವನ ಪದ್ಧತಿಯ ಕಡೆ ಆಸಕ್ತಿ ತೋರುತ್ತಿದ್ದಾರೆ. ಜನರ ಆಸಕ್ತಿಗೆ ಅನುಗುಣವಾಗಿ ಲಿಡ್ಕರ್ ಪರಂಪರೆಯ ಪ್ರತೀಕವಾಗಿ ರಾಜ-ಮಹಾರಾಜರು ಧರಿಸುತ್ತಿದ್ದ ಚರ್ಮದ ಮಾದರಿಯ ‘ಮಹಾರಾಜ-ಮಹಾರಾಣಿ’ ಪಾದರಕ್ಷೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಲೆದರ್ ಬಳಸಿ ತಯಾರಿಸಿರುವ ಮಹಾರಾಜ-ಮಹಾರಾಣಿ ಪಾದರಕ್ಷೆಗಳು ಕೊಲ್ಹಾಪುರಿ ಪಾದರಕ್ಷೆಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟವಾಗಿವೆ. ವಿದೇಶಗಳಿಗೂ ರಫ್ತು ಮಾಡುವಷ್ಟು ಗುಣಮಟ್ಟ ಹೊಂದಿವೆ. ಮುಂದಿನ ದಿನಗಳಲ್ಲಿ ಬಹಳ ಬೇಡಿಕೆ ಬರುವ ನಿರೀಕ್ಷೆಯಿದೆ.
| ರಾಜು ಕುಶಲಕರ್ವಿು
ಚರ್ಮದಿಂದ ತಯಾರಿಸಿದ ಪಾದರಕ್ಷೆ ಆಗಿರುವುದರಿಂದ ದರವೂ ಕೊಂಚ ದುಬಾರಿ. ವಿವಿಧ ವಿನ್ಯಾಸಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದೆ. 3 ಸಾವಿರ ರೂ.ನಿಂದ ಬೆಲೆ ಆರಂಭವಾಗುತ್ತದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 5 ಸಾವಿರ ರೂ. ನಿಗದಿಪಡಿಸಲಾಗಿದೆ.