ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕತ್ವ ಬಲಗೊಳ್ಳುವುದಕ್ಕೆ ಶಾಸಕ ಡಾ.ಹೆಚ್.ಸಿ ಮಹದೇವಪ್ಪ ಸಾಕಷ್ಟು ಶ್ರಮಿಸಿದ್ದಾರೆ. ಪರಿಶಿಷ್ಟ ಸಮುದಾಯಗಳ ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿರುವ ಅವರು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ(ಅಹಿಂದ) ನಾಯಕತ್ವ ವಹಿಸಿಕೊಳ್ಳುವಂತೆ 10ಕ್ಕೂ ಅಧಿಕ ದಲಿತ ಸಂಘಟನೆಗಳು ಒತ್ತಾಯಿಸಿವೆ.
40 ವರ್ಷದ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಪ್ಪು,ಚುಕ್ಕೆ ಇಲ್ಲದ ವ್ಯಕ್ತಿತ್ವ ಹೊಂದಿರುವ ಮಹದೇವಪ್ಪ, ತಮಗೆ ಅಧಿಕಾರ ಸಿಕ್ಕಾಗ ಜಾತಿ,ಭೇದ ಮಾಡದೆ ಒಳ್ಳೆಯ ಕೆಲಸ ಮಾಡಿದ್ದಾರೆ. ಹಲವು ವಿಷಯಾಧಾರಿತ ಹೋರಾಟಗಳಲ್ಲಿ ದಲಿತ ಸಂಘಟನೆಗಳ ಬೆನ್ನೆಲುಬಾಗಿ ನಿಂತಿದ್ದಾರೆ. ಅಂಬೇಡ್ಕರ್ ವಾದವನ್ನು ಗಟ್ಟಿಯಾಗಿ ಬೇರೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅತ್ಯುತ್ತಮ ಜನ ಸಂಘಟಕರಾಗಿರುವ ಶಾಸಕರು, ಪರಿಶಿಷ್ಟ ಸಮುದಾಯಗಳ ಹಕ್ಕು ರಕ್ಷಣೆ ಮಾಡಬೇಕು ಎಂದು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ 2 ಬಾರಿ ಸಚಿವರಾಗಿದ್ದ ಮಹದೇವಪ್ಪ,ಲೋಕೋಪಯೋಗಿ ಸಚಿವರಾಗಿದ್ದ ವೇಳೆ ಅಂದಾಜು 30 ಸಾವಿರ ಕಿಲೋಮೀಟರ್ ರಸ್ತೆಗಳು ಮತ್ತು ಬೃಹತ್ ಪ್ರಮಾಣದ ಮೂಲ ಸೌಕರ್ಯದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು.ಅವರ ಕೆಲಸಕ್ಕೆ ವಿಶ್ವಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜತೆಗೆ, ವಿಪಕ್ಷದವರೇ ಅವರನ್ನು ಸನ್ಮಾನ ಮಾಡಿತ್ತು. ಇಂತಹ ಒಳ್ಳೆಯ ಕೆಲಸ ಮಾಡಿರುವ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಬೇಸರವಾಗಿದೆ ಎಂದರು.
ಅಂಬೇಡ್ಕರ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಪರಿಶಿಷ್ಟ ಬಲಗೈ ಸಮುದಾಯವು ಹಲವು ದಶಕಗಳಿಂದ ಕಾಂಗ್ರೆಸ್ ಬೆಂಬಲಿಸುತ್ತಿದೆ. ಇದನ್ನು ಆ ಪಕ್ಷವು ಸರಿಯಾಗಿ ಗಮನಿಸಬೇಕು. ಮಹದೇವಪ್ಪ ಎಲ್ಲ ಸಮುದಾಯಗಳನ್ನೂ ಜತೆಗೆ ಕೊಂಡೊಯ್ಯುವ ಶಕ್ತಿ ಹೊಂದಿದ್ದಾರೆ. ಮುಂದೆ ಅವರೇ ಅಹಿಂದ ಸಮುದಾಯದ ನಾಯಕತ್ವ ವಹಿಸಬೇಕು ಎಂದು ದಲಿತ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಸಿ.ಸಿದ್ದಲಿಂಗಯ್ಯ ತಿಳಿಸಿದರು.