- ಸರ್ಕಾರದ ನಿರ್ಧಾರ ಎತ್ತಿಹಿಡಿದ ಹೈಕೋರ್ಟ್
- 20 ವರ್ಷಗಳಿಂದ ವಂಚನೆಯಲ್ಲಿ ತೊಡಗಿದ್ದ ಸೊಸೈಟಿ
ಬೆಂಗಳೂರು: ನಿಯಮಗಳನ್ನು ಗಾಳಿಗೆ ತೂರಿ ಕಳೆದ 20 ವರ್ಷಗಳಿಂದ ಶಾಲೆ ನಡೆಸುತ್ತಿದ್ದ ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಅಲ್-ಜಾಮಿಯಾ ಮೊಹಮ್ಮದಿಯಾ ಎಜುಕೇಶನ್ ಸೊಸೈಟಿ (ಮುಂಬೈ) ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಸೊಸೈಟಿಯು 1979ರಲ್ಲಿ ಮುಂಬೈನಲ್ಲಿ ನೋಂದಣಿಯಾಗಿದೆ ಎಂದು ನಕಲಿ ಪ್ರಮಾಣಪತ್ರ ಸಲ್ಲಿಸಿ, 2006ರಲ್ಲಿ ಜಾಮಿಯಾ ಮಹಮ್ಮದ್ದೀಯ ಮನ್ಸೂರಾ ಹೆಸರಿನಲ್ಲಿ ಶಾಲೆಗೆ ಅನುಮತಿ ಪಡೆದುಕೊಂಡಿತ್ತು. ಅಲ್ಲದೆ, ಒಂದೇ ಮಾನ್ಯತೆ ಪತ್ರದಡಿ ಬೇರೆ ಬೇರೆ ಹೆಸರಿನಲ್ಲಿ ಶಾಲೆಗಳನ್ನು ನಡೆಸುವುದು, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕವನ್ನು ನೋಂದಣಿಯಾಗದ ಸಂಸ್ಥೆಯ ಖಾತೆಗಳಿಗೆ ಜಮೆ ಮಾಡುವುದು ಮತ್ತು ಶಾಲಾ ಆವರಣದಲ್ಲಿ ಕಾನೂನುಬಾಹಿರವಾಗಿ ಮದರಸಾ ನಡೆಸುತ್ತಿರುವುದು ತನಿಖೆಯಿಂದ ದೃಡಪಟ್ಟಿತ್ತು. ಈ ಹಿನ್ನೆಲೆಯಲ್ಲಿ 2025ರ ಮೇ 30ರಂದು ಶಿಕ್ಷಣ ಇಲಾಖೆಯು ಶಾಲೆಯ ಮಾನ್ಯತೆ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ದಂಡ ವಿಧಿಸಿದ ನ್ಯಾಯಾಲಯ
ಈ ಅರ್ಜಿಯು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದಾಗ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೋರ್ಟ್ ಅನುಮತಿಯಿಲ್ಲದೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಅನ್ನು ಸೊಸೈಟಿ ಸಲ್ಲಿಸಿತ್ತು. ಆದರೆ, ಅದನ್ನು ಉಲ್ಲಂಘಿಸಿ ಉರ್ದು ದಿನಪತ್ರಿಕೆಯೊಂದರಲ್ಲಿ 2026-27ನೇ ಸಾಲಿನ ಪ್ರವೇಶಾತಿ ಬಗ್ಗೆ ಜಾಹೀರಾತು ನೀಡಿ ಪಾಲಕರಿಂದ ಶುಲ್ಕ ವಸೂಲಿ ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠ, 25 ಸಾವಿರ ರೂ. ದಂಡ ವಿಧಿಸಿದೆ.
ತನಿಖಾ ಸಮಿತಿಯ ವರದಿ
ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 2025 ಬ್ರವರಿ ತಿಂಗಳಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿ ತನಿಖೆಗೆ ಆದೇಶಿಸಿತ್ತು. ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿ ಹೆಸರಲ್ಲಿ ಶಾಲೆ ನಡೆಸುತ್ತಿರುವುದು ಮತ್ತು ನಿಯಮಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಬಹಿರಂಗವಾಗಿತ್ತು. ಮುಂಬೈನ ಸಾರ್ವಜನಿಕ ಟ್ರಸ್ಟ್ ನೋಂದಣಿ ಕಚೇರಿಯು ಕೂಡ ಸೊಸೈಟಿ ಸಲ್ಲಿಸಿದ್ದ 1979ರ ಪ್ರಮಾಣಪತ್ರವು ಸಂಪೂರ್ಣ ನಕಲಿ ಎಂದು ಖಚಿತಪಡಿಸಿತ್ತು. ಇದನ್ನು ಪರಿಗಣಿಸಿದ್ದ ಶಿಕ್ಷಣ ಇಲಾಖೆಯು ಶಾಲೆಯ ಮಾನ್ಯತೆ ರದ್ದುಪಡಿಸಿದೆ.