Madhusudan Sai Hospital revived the girl
ಚಿಕ್ಕಬಳ್ಳಾಪುರ: ಉಸಿರಾಟ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮೂರೂವರೆ ವರ್ಷದ ಬಾಲಕಿಗೆ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯ ವೈದ್ಯರು ಹೊಸ ಬದುಕು ನೀಡಿದ್ದಾರೆ. ಸಂಪೂರ್ಣವಾಗಿ ಮುಚ್ಚಿಕೊಂಡಿದ್ದ ಉಸಿರಾಟದ ನಾಳವನ್ನು ತಂತ್ರಜ್ಞಾನ ಬಳಸಿ, ಅಪರೂಪದ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಿದ್ದಾರೆ. "
ಮುದ್ದೇನಹಳ್ಳಿ ಆಸ್ಪತ್ರೆ ದೇವಾಲಯ ಇದ್ದ ಹಾಗೆ.ಯಾವ ಆಸ್ಪತ್ರೆಯಲ್ಲೂ ಸಿಗದ ವೈದ್ಯಕಿಯ ಸೌಲಭ್ಯ ಮತ್ತು ಪ್ರೀತಿಯನ್ನು ಇಲ್ಲಿ ನೀಡುತ್ತಾರೆ. ನನ್ನ ಮಗಳಿಗೆ ಬದುಕು ಕೊಟ್ಟ ವೈದ್ಯರಿಗೆ ಆಭಾರಿ. ನಮ್ಮಂತಹ ಬಡವರ ಬದುಕಿಗೆ ಇದು ಆಶಾಕಿರಣ.
> ಗೌರವ್, ಬಾಲಕಿಯ ತಂದೆ
ಛತ್ತೀಸ್ಗಢ ಮೂಲದ ಬಾಲಕಿ ಕಳೆದ 2025ರಲ್ಲಿ ಬೇರೆ ಕಡೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಚಿಕಿತ್ಸೆ ನಂತರ ಉಂಟಾದ ತೊಂದರೆ ಉಲ್ಬಣಗೊಂಡು ದೀರ್ಕಾಲ ಉಸಿರಾಟದ ಟ್ಯೂಬ್ ಅಳವಡಿಸಬೇಕಾಯಿತು. ಇದರ ಪರಿಣಾಮವಾಗಿ ಸಬ್ಗ್ಲೋಟಿಕ್ ಸ್ಟೆನೋಸಿಸ್ (ಉಸಿರಾಟದ ನಾಳ ಕಿರಿದಾಗಿ ಬಹುತೇಕ ಮುಚ್ಚಿ ಹೋಗುವ ಸ್ಥಿತಿ) ಎಂಬ ಗಂಭೀರ ಸಮಸ್ಯೆ ಕಾಣಿಸಿಕೊಂಡು, ಉಸಿರಾಟದ ನಾಳ ಕಿರಿದಾಗಿ ಸಂಪೂರ್ಣ ಮುಚ್ಚಿಕೊಂಡಿತ್ತು. ಪರಿಣಾಮ, ಬಾಲಕಿಗೆ ಸಹಜವಾಗಿ ಉಸಿರಾಡುವುದೇ ಕಷ್ಟವಾಗಿತ್ತು.
ಛತ್ತೀಸ್ಗಢದ ಏಮ್ಸ್ ಸೇರಿ ಹಲವು ಆಸ್ಪತ್ರೆಗಳನ್ನು ಸಂಪರ್ಕಿಸಿದರೂ, ಪ್ರಕರಣ ಜಟಿಲವಾಗಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ವೈದ್ಯರು ಹಿಂದೇಟು ಹಾಕಿದ್ದರು.
"
ಬಾಲರೋಗಿಗಳಲ್ಲಿ ಸಂಪೂರ್ಣವಾಗಿ ಮುಚ್ಚಿಕೊಂಡ ಉಸಿರಾಟದ ನಾಳವನ್ನು ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ಮರುನಿರ್ಮಿಸುವುದು ಅತ್ಯಂತ ಅಪರೂಪದ ಸಾಧನೆ. ಈ ಬಾಲಕಿಗೆ ಅತ್ಯಂತ ಸಂಕೀರ್ಣವಾದ ಐದು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಜಗತ್ತಿನ ಕೆಲವೇ ಆಸ್ಪತ್ರೆಗಳಲ್ಲಿ ಇಂತಹ ಜಟಿಲ ಶಸ್ತ್ರಚಿಕಿತ್ಸೆ ನಡೆಸುವ ಪರಿಣತಿ ಮತ್ತು ಸೌಲಭ್ಯಗಳಿವೆ. ಅದರಲ್ಲೂ ಯಶಸ್ಸಿನ ಪ್ರಮಾಣ ಬಹಳ ಕಡಿಮೆ ಇರುತ್ತದೆ. ನಾವು ಈ ಮಗುವಿಗೆ ಮರುಜನ್ಮ ನೀಡುವಲ್ಲಿ ಯಶಸ್ವಿಯಾಗಿದ್ದೇವೆ.> ಡಾ.ಕೆ.ಬಿ.ಬಾಲಿ, ಇಎನ್ಟಿ ವಿಭಾಗದ ಮುಖ್ಯಸ್ಥ
ಕೊನೆಯ ಪ್ರಯತ್ನವಾಗಿ ಬಾಲಕಿಯನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕಿಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಇಲ್ಲಿನ ತ ವೈದ್ಯರ ತಂಡವು ಈ ಸವಾಲನ್ನು ಸ್ವೀಕರಿಸಿ ಹಂತ ಹಂತವಾಗಿ ಚಿಕಿತ್ಸೆ ನೀಡಿತು. ಲೇಸರ್, ಕೋಬ್ಲೇಷನ್, ಬಲೂನ್ ಡೈಲೇಷನ್ ಹಾಗೂ ಸ್ಟಂಟ್ ಅಳವಡಿಕೆ ಸೇರಿ ತಂತ್ರಜ್ಞಾನ ಬಳಸಿ ಉಸಿರಾಟದ ನಾಳವನ್ನು ಸರಿಪಡಿಸಿದೆ.
ಮೇ 11ರಂದು ಸ್ಟಂಟ್, ನಂತರ ಹಂತ ಹಂತವಾಗಿ ಚಿಕಿತ್ಸೆಯೊಂದಿಗೆ ಮೇ 18ರಂದು ಟ್ರೇಕಿಯೊಸ್ಟಮಿ ಟ್ಯೂಬ್ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರಿಂದ ಬಾಲಕಿಗೆ ಸಹಜವಾಗಿ ಉಸಿರಾಡಲು ಮತ್ತು ಮಾತನಾಡಲು ಸಾಧ್ಯವಾಗಿದೆ. 30 ಲಕ್ಷ ರೂಪಾಯಿ ವೆಚ್ಚವಾಗಬಹುದಾದ ಈ ಚಿಕಿತ್ಸೆಯನ್ನು ಮುದ್ದೇನಹಳ್ಳಿ ವೈದ್ಯಕಿಯ ಆಸ್ಪತ್ರೆ ಉಚಿತವಾಗಿ ನೆರವೇರಿಸಿರುವುದರಿಂದ ಬಾಲಕಿಯ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.