ಶಸ್ತ್ರಚಿಕಿತ್ಸೆ ನೆರವೇರಿಸುತ್ತಿರುವ ನುರಿತ ವೈದ್ಯರ ತಂಡ 
ರಾಜ್ಯ

ಮಧುಸೂದನ್ ಸಾಯಿ ಆಸ್ಪತ್ರೆಯ ದಾಖಲೆ, ದುಬಾರಿ ಶಸ್ತ್ರಚಿಕಿತ್ಸೆ ಯಶಸ್ವಿ

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 'ಮಿನಿಮಲ್ ಇನ್ವೇಸಿವ್ ಟೋಟಲ್ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಶಸ್ತ್ರಚಿಕಿತ್ಸೆ'ಯನ್ನು ನೆರವೇರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಲಾಗಿದೆ.
ಅದರಲ್ಲೂ ಉಚಿತವಾಗಿ ಈ ತಂತ್ರಜ್ಞಾನದಲ್ಲಿ ಶಸ್ತ್ರಚಿಕಿತ್ಸೆ ಕೈಗೊಂಡ ಜಗತ್ತಿನ ವೈದ್ಯಕೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಭಾರತದಲ್ಲಿ ಈ ಚಿಕಿತ್ಸೆ ಪದ್ದತಿಯನ್ನು ಹೊಂದಿರುವ ಮೂರನೇ ಕೇಂದ್ರವಾಗಿದೆ.
ಹಾರ್ಟ್ ವಾಲ್ಟ್ ಬ್ಯಾಂಕ್ ನ ನಿರ್ದೇಶಕ ಡಾ ಸಿ.ಎಸ್.ಹಿರೇಮಠ್ ನೇತೃತ್ವದಲ್ಲಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡವು ಕೋಲ್ಕತ್ತಾದ ಮಣಿಪಾಲ ಆಸ್ಪತ್ರೆಯ ಮುಖ್ಯ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಸರ್ಜನ್ ಡಾ ಸಂದೀಪ್ ಸರ್ದಾರ್ ತಂಡದ ಸಹಯೋಗದೊಂದಿಗೆ 29 ವರ್ಷದ ಮಹಿಳಾ ರೋಗಿಗೆ ಸಂಪೂರ್ಣ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರೊಂದಿಗೆ ಆಕೆಗೆ ಹೊಸ ಜೀವನ ನೀಡಿದಂತಾಗಿದೆ.
ಸುಧಾರಿತ ಉಪಕರಣಗಳೊಂದಿಗೆ ನಡೆಸಲಾದ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ರೋಗಿಗೆ 2 ಸೆಂಮೀ ಗಿಂತ ಕಡಿಮೆ ಗಾತ್ರದ ಗಾಯದ ಗುರುತು ಆಗಿದೆ. ಅಲ್ಲದೇ ಅವರು ಕೇವಲ 72 ಗಂಟೆಗಳಲ್ಲಿ ಚೇತರಿಸಿಕೊಳ್ಳಲು ಮತ್ತು ತ್ವರಿತವಾಗಿ ಡಿಸ್ಚಾರ್ಚ್ ಆಗಲು ಸಾಧ್ಯವಾಗಿದೆ. ಈ ವೈದ್ಯಕೀಯ ಬೆಳವಣಿಗೆಯು ರೋಗಿಗಳಿಗೆ ಸುರಕ್ಷಿತ ಹೃದಯ ಶಸ್ತ್ರಚಿಕಿತ್ಸೆಗೆ ಪರಿಣಾಮಕಾರಿ. ಸುಧಾರಿತ ಹೊಸ ತಂತ್ರಜ್ಞಾನದ ಚಿಕಿತ್ಸೆ ಹಾಗೂ ಆರೈಕೆಯು ಎಲ್ಲರಿಗೂ ಸಿಗಬೇಕು. ಕೇವಲ ಶ್ರೀಮಂತರಿಗೆ ಸೀಮಿತವಾಗಬಾರದು ಎಂಬ ಗುರಿಯೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆಯಲ್ಲಿ ತಾಂತ್ರಿಕ ಶ್ರೇಷ್ಠತೆ ಮತ್ತು ನಾವೀನ್ಯತೆಯ ಉಚಿತ ಸೇವೆ ಸಲ್ಲಿಸುವ ಮೂಲಕ ಸಂಸ್ಥೆಯು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್'ನ ಬದ್ಧತೆಯನ್ನು ಎತ್ತಿ ಹಿಡಿದಿದೆ.