Madhugiri Thapam Second Class Assistant, Husband Arrested
ಮಧುಗಿರಿ: ತಾಲೂಕು ಪಂಚಾಯಿತಿ ಕಚೇರಿಯಲ್ಲಿ 4.24 ಕೋಟಿ ರೂಪಾಯಿ ಸರ್ಕಾರಿ ಹಣ ದುರುಪಯೋಗ ಪ್ರಕರಣ ದಾಖಲಾಗಿ ಎರಡೂವರೆ ತಿಂಗಳ ಬಳಿಕ ಎ&1 ಆರೋಪಿ ದ್ವೀತಿಯ ದರ್ಜೆ ಸಹಾಯಕಿ ಸೌಮ್ಯಾ ಹಾಗೂ ಎ&2 ಆರೋಪಿ ಅವರ ಪತಿ ಜಿ.ಆರ್.ರಮೇಶ್ ಅವರನ್ನು ಮಧುಗಿರಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ತಾಪಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವೀತಿಯ ದರ್ಜೆ ಸಹಾಯಕಿ ಸೌಮ್ಯಾ ಅವರು ನಿವೃತ್ತ ಹಾಗೂ ಮೃತ ಸರ್ಕಾರಿ ನೌಕರರ ಅಂತಿಮ ಗಳಿಕೆ ರಜೆ ನಗದೀಕರಣ ಬಿಲ್ಗಳನ್ನು ಅನಧಿಕೃತವಾಗಿ ಸೃಷ್ಟಿಸಿ, ತಮ್ಮ ಕುಟುಂಬದ ಸದಸ್ಯರು ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ಸರ್ಕಾರಿ ಹಣ ವರ್ಗಾವಣೆ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಬಿ.ವಿ.ಅಶ್ವಿಜ ಅವರು ಸೌಮ್ಯಾ ಅವರನ್ನು ಅಮಾನತು ಮಾಡಿ ಪ್ರಕರಣ ದಾಖಲಿಸಲು ಆದೇಶಿಸಿದ್ದರು. ನಂತರ ಈ ಪ್ರಕರಣದಲ್ಲಿ ಎ&1 ಸೌಮ್ಯಾ, ಎ&2 ರಮೇಶ್, ಎ&3 ಶಿವಲೀಲಾ, ಎ&4 ಪ್ರವಿಣ್, ಎ&5 ಸುಮಾ ಹಾಗೂ ಎ&6 ಮೀನಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ವಿವಿಧ ಖಾತೆಗೆ ಹಣ ವರ್ಗಾವಣೆ: ಪರಿಶೀಲನೆ ವೇಳೆ ನಿವೃತ್ತ ವ್ಯವಸ್ಥಾಪಕಿ ಮಂಜುಳಮ್ಮಗೆ 4,91,730 ಹಾಗೂ ನಿವೃತ್ತ ಕಾರ್ಯದರ್ಶಿ ರಂಗನಾಥಯ್ಯಗೆ 14,850 ಮಾತ್ರ ನ್ಯಾಯಬದ್ಧ ಪಾವತಿಗಳಾಗಿದ್ದು, ಉಳಿದ ಸುಮಾರು 4.19 ಕೋಟಿ ರೂ. ಅನುಮಾನಾಸ್ಪದವಾಗಿ ಪಾವತಿಯಾಗಿರುವುದು ಬೆಳಕಿಗೆ ಬಂದಿತ್ತು. ದೂರಿನ ಪ್ರಕಾರ, ಕಾರ್ಯನಿರ್ವಾಹಕ ಅಧಿಕಾರಿಗಳ ಖಜಾನೆ&2 ಲಾಗಿನ್ ಹಾಗೂ ಡಿಜಿಟಲ್ ಸಹಿ ಕೀಗಳನ್ನು ಅನಧಿಕೃತವಾಗಿ ಬಳಸಿ 2020ರ ಫೆಬ್ರವರಿಯಿಂದ 2025ರ ಮಾರ್ಚ್ವರೆಗೆ ಹಲವು ನಕಲಿ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆ ನಡೆಸಲಾಗಿದೆ. ಈ ಹಣವನ್ನು ಜಿ.ಆರ್.ರಮೇಶ್, ಜಿ.ಆರ್.ಶಿವಲೀಲಾ, ಜಿ.ಆರ್.ಸುಮಾ, ಜಿ.ಆರ್.ಮೀನಾ ಹಾಗೂ ಕಚೇರಿ ಸಿಬ್ಬಂದಿ ಎಂ.ಎನ್.ಪ್ರವಿಣ್ ಅವರ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.\
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 147 ಪ್ರಕರಣಗಳಲ್ಲಿ 82.77 ಲ ರೂ. ಮೊತ್ತದ ಫಲಾನುಭವಿಗಳ ವಿವರಗಳು ಹೊಂದಿಕೆಯಾಗದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರೂ ಅಗತ್ಯ ದಾಖಲೆ ಒದಗಿಸದ ಆರೋಪದ ಮೇರೆಗೆ ಮಧುಗಿರಿ ತಾಪಂ ಇಒ ಲ್ಮಣ್ ಹಾಗೂ ಈ ಹಿಂದೆ ಮಧುಗಿರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಚಿಕ್ಕನಾಯಕನಹಳ್ಳಿ ತಾಪಂ ಇಒ ದೊಡ್ಡಸಿದ್ದಪ್ಪ ಅವರನ್ನು ಸಹ ಜಿಪಂ ಸಿಇಒ ಮೇ 29ರಂದು ಅಮಾನತು ಮಾಡಿದ್ದರು.