ಮಧವಾನಂದ ಪ್ರಭೂಜಿ 
ರಾಜ್ಯ

ಮಾಧವಾನಂದ ಆಶ್ರಮದಲ್ಲಿ ಇಂದಿನಿಂದ ಸಪ್ತಾಹ

ಮಮದಾಪುರ: ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಇಂಚಗೇರಿ ಮಠದ ಸದ್ಗುರು ಮಾಧವಾನಂದ ಪ್ರಭೂಜಿ, ಗುರು ಪುತ್ರೇಶ್ವರ ಮಹಾರಾಜರು ಹಾಗೂ ಜಗನ್ನಾಥ ಮಹಾರಾಜರ ಸ್ಮರಣಾರ್ಥ ಜ.7 ರಿಂದ 8ರ ವರೆಗೆ ಸಪ್ತಾಹ ಜರುಗಲಿದೆ.
ಗ್ರಾಮದಲ್ಲಿ ಕಳೆದ 35 ವರ್ಷಗಳ ಹಿಂದೆ ಶ್ರೀ ೇತ್ರ ಇಂಚಗೇರಿ ಮಠದ ಸದ್ಗುರು ಗುರು ಪುತ್ರೇಶ್ವರ ಮಹಾರಾಜರ ಆದೇಶದ ಮೇರೆಗೆ ಇಂಚಗೇರಿ ಸಂಪ್ರದಾಯ ಸಪ್ತಾಹ ಪ್ರಾರಂಭಗೊಂಡಿತು. ಇಲ್ಲಿಯವರೆಗೆ ಜಗನ್ನಾಥ ಮಹಾರಾಜರ ಅನುಗ್ರಹದಿಂದ ಹಾಗೂ ಈಗಿನ ರೇವಣಸಿದ್ದೇಶ್ವರ ಮಹಾರಾಜರ ಮಾರ್ಗದರ್ಶನದಲ್ಲಿ ಹಾಗೂ ಗ್ರಾಮದ ಸಕಲ ಸದ್ಭಕ್ತರು ಇಂಚಗೇರಿ ಸಂಪ್ರದಾಯ ಸದ್ಭಕ್ತರ ದಾನಿಗಳಿಂದ ಪ್ರತಿ ವರ್ಷ ಎರಡು ದಿನಗಳ ಕಾಲ ಸಪ್ತಾಹ ಕಾರ್ಯಕ್ರಮ ನೆರವೇರುತ್ತಿದೆ.
ಕಾರ್ಯಕ್ರಮಗಳು: ಜ.7ರಂದು ಸಂಜೆ 5 ಗಂಟೆಗೆ ಶ್ರೀ ಮಾಧವಾನಂದ ಪ್ರಭೂಜಿ ರಥೋತ್ಸವ ಹಾಗೂ ಕುಂಭ ಮೆರವಣಿಗೆ ನಡೆಯಲಿದೆ. ಸಂಜೆ 7 ಗಂಟೆಗೆ ದಾಸ ಬೋಧ ಹಾಗೂ ವೀಣಾ ಪೂಜೆಯೊಂದಿಗೆ ಸಪ್ತಾಹ ಪ್ರಾರಂಭವಾಗಲಿದೆ. ರಾತ್ರಿ 10.30ಕ್ಕೆ ಗ್ರಾಮದ ಸಕಲ ಭಜನಾ ಮಂಡಳಿ ಹಾಗೂ ಕಡಕಬಾಂವಿ ಮಾಧವಾನಂದ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಜರುಗಲಿದೆ.
ಜ.8ರಂದು ಬೆಳಗ್ಗೆ ಮಾಧವಾನಂದ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಕಾಕಡಾರತಿ ನೆರವೇರಲಿದೆ. ಬೆಳಗ್ಗೆ 9ಕ್ಕೆ ದಿಂಡಿ ಯಾತ್ರಿಕರನ್ನು ಹಾಗೂ ಪಲ್ಲಕ್ಕಿ ಬರಮಾಡಿಕೊಳ್ಳಲಾಗುವುದು. ಬಳಿಕ ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಸಪ್ತಾಹ ನೆರವೇರಲಿದೆ. ಸ್ಥಳಿಯ ಚರಮೂರ್ತಿಶ್ವರ ಸ್ವಾಮಿ ಹಾಗೂ ಮೌನ ಮಲ್ಲಿಕಾರ್ಜುನ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸುವರು. ಸಂಗಪ್ಪ ಸಾಲಿ, ಶಂಕರೆಪ್ಪ ಮಹಾರಾಜರು, ರಾಮಣ್ಣ ಮಹಾರಾಜರು, ವಸಂತ ಮಹಾರಾಜರು, ಹಾಗೂ ಗಿರಿಮಲ್ಲಪ್ಪ ಬಂಟ್ರೋಳಿ ಪ್ರವಚನ ಕಾರ್ಯಕ್ರಮ ನೀಡುವರು. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಟಿ.ಆರ್​.ಕಾಗಲ, ಮಡ್ದೆಪ್ಪ ತೋಳಿನವರ ಹಾಗೂ ಮುಖಂಡರಾದ ಸುರೇಶ ಸನದಿ, ಕೆಂಪಣ್ಣ ಮೆಲನ್ನವರ ಪಾಲ್ಗೊಳ್ಳಲಿದ್ದಾರೆ ಎಂದು ಮಾಧವಾನಂದ ಆಶ್ರಮದ ಕೆಂಚಪ್ಪ ಮಹಾರಾಜರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.